ಭಿನ್ನಮತೀಯರ ಪತ್ರಕ್ಕೆ ಮನಮೋಹನ ಸಿಂಗ್ , ಆ್ಯಂಟನಿ ಖಂಡನೆ

ಹೊಸದಿಲ್ಲಿ, ಆ. 24: ಪಕ್ಷದ ನಾಯಕತ್ವ ಬಿಕ್ಕಟ್ಟಿಗೆ ಸಂಬಂಧಿಸಿ 26 ಮಂದಿ ಕಾಂಗ್ರೆಸ್ ನಾಯಕರು ಪತ್ರ ಬರೆದಿರುವುದನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಕೇಂದ್ರ ಸಚಿವ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ತೀವ್ರವಾಗಿ ಖಂಡಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಮನಮೋಹನ್ ಸಿಂಗ್‌ಅವರು ಸೋನಿಯಾರನ್ನು ಆಗ್ರಹಿಸಿದ್ದಾರೆ.ಈ ಪತ್ರಕ್ಕಿಂತಲೂ ಅಧಿಕವಾಗಿ, ಪತ್ರದಲ್ಲಿ ಉಲ್ಲೇಖಿಸಲಾದ ಅಂಶಗಳು ಕ್ರೌರ್ಯವಾದುದು ಎಂದರು. ಸೋನಿಯಾಗಾಂಧಿ ಅವರ ತ್ಯಾಗಗಳನ್ನು ಕೂಡಾ ಉಲ್ಲೇಖಿಸಿದ ಆ್ಯಂಟನಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ರಾಹುಲ್ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಭಿನ್ನಮತೀಯರು ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿರುವುದು ದುರದೃಷ್ಟಕರ. ಅದು ಹೈಕಮಾಂಡ್ ಹಾಗೂ ಪಕ್ಷವೆರಡನ್ನೂ ದುರ್ಬಲಗೊಳಿಸುತ್ತದ ಎಂದು ಹೇಳಿದ್ದಾರೆ.
ಟ್ವೀಟ್ ಸಮರ ಅಂತ್ಯಗೊಳಿಸಿದ ಸಿಬಲ್
ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಕಪಿಲ್ ಸಿಬಲ್ ತನ್ನ ವಿವಾದಾತ್ಮಕ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ಪಕ್ಷದ ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ನಾಯಕರು ‘ಭಿನ್ನಮತೀಯರು’ ಮತ್ತು ಬಿಜೆಪಿ ಜೊತೆ ಕೈಜೋಡಿಸಿದವರು ಎಂದು ಆಪಾದಿಸಿದ್ದ ರಾಹುಲ್‌ಗಾಂಧಿ ವಿರುದ್ಧ ಕಪಿಲ್ ಸಿಬಲ್ ಟ್ವಿಟರ್‌ನಲ್ಲಿ ಪ್ರತಿದಾಳಿ ನಡೆಸಿದ್ದರು. ಮತ್ತು ಕಾಂಗ್ರೆಸ್ ಪಕ್ಷಕ್ಕೆ ತನ್ನ ಕೊಡುಗೆಗಳನ್ನು ಸ್ಮರಿಸಿದ್ದರು. ‘‘ರಾಜಸ್ಥಾನ ಬಿಕ್ಕಟ್ಟಿಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷ ಪರ ವಾದಿಸಿ, ಗೆಲುವು ತಂದುಕೊಟ್ಟಿದ್ದೇನೆ. ಮಣಿಪುರದಲ್ಲಿ ಬಿಜೆಪಿ ಸರಕಾರವನ್ನು ಪತನಗೊಳಿಸಲು ಪಕ್ಷದ ಪರವಾಗಿ ವಾದಿಸಿದ್ದೇನೆ. ಕಳೆದ 30 ವರ್ಷಗಳಲ್ಲಿ ಒಂದೇ ಒಂದು ವಿಷಯದಲ್ಲೂ ಬಿಜೆಪಿ ಪರ ಹೇಳಿಕೆ ನೀಡಿದ್ದಿಲ್ಲ. ಆದಾಗ್ಯೂ ನಾವು ಬಿಜೆಪಿ ಜೊತೆ ಶಾಮೀಲಾಗಿದ್ದೇವೆ ’’ಎಂದು ಆರೋಪಿಸಲಾಗಿದೆ ಎಂದು ಕಪಿಲ್ ಟ್ವೀಟ್ ಮಾಡಿದ್ದರು.
ಆನಂತರ ಕಪಿಲ್ ಸಿಬಲ್ ಮರುಟ್ವೀಟ್ ಮಾಡಿದ್ದು, ತಾನು ಅಂತಹ ಹೇಳಿಕೆಯನ್ನೇ ನೀಡಿಲ್ಲವೆಂದು ರಾಹುಲ್‌ಗಾಂಧಿ ತನಗೆ ವೈಯಕ್ತಿಕವಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ತ ನ್ನ ಹಿಂದಿನ ಟ್ವೀಟ್ ಅನ್ನು ಹಿಂದೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಪಕ್ಷ ತೊರೆಯಲು ಸಿದ್ಧ: ಆಝಾದ್ ಸವಾಲು
ಈ ಮಧ್ಯೆ ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಝಾದ್ ಕೂಡಾ ತಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ ಎಂಬುದು ಸಾಬೀತಾದಲ್ಲಿ ಪಕ್ಷವನ್ನೇ ತೊರೆಯಲು ಸಿದ್ಧನಿದ್ದೇನೆಂದು ಹೇಳಿದ್ದಾರೆ. ಆದಾಗ್ಯೂ ಆನಂತರ ಅವರು ಕೂಡಾ ಸ್ಪಷ್ಟೀಕರಣ ನೀಡಿ, ತಾನು ಇತರ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದೇನೆಯೇ ಹೊರತು ರಾಹುಲ್ ಬಗ್ಗೆ ಅಲ್ಲವೆಂದು ಅವರು ತಿಳಿಸಿದ್ದಾರೆ.







