ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಲಿರುವ ಹೊಸ ಪೀಠ

ಹೊಸದಿಲ್ಲಿ: ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ 2009ರಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಹೊಸ ಪೀಠವೊಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಈ ಪ್ರಕರಣದ ವಿಚಾರಣೆಯನ್ನು ಸೂಕ್ತ ಪೀಠವೊಂದು ನಡೆಸುವಂತಾಗಲು ಕ್ರಮ ಕೈಗೊಳ್ಳುವಂತೆ ಇಲ್ಲಿಯ ತನಕದ ವಿಚಾರಣೆ ನಡೆಸಿದ್ದ ಜಸ್ಟಿಸ್ ಅರುಣ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನು ವಿನಂತಿಸಿತ್ತು. ಈ ಪ್ರಕರಣ ಕುರಿತಂತೆ ಹಲವು ಪ್ರಶ್ನೆಗಳ ಕುರಿತು ಪರಿಶೀಲನೆ ನಡೆಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
“ನನಗೆ ಸಮಯದ ಅಭಾವವಿದೆ. ನಾನು ನಿವೃತ್ತನಾಗುತ್ತಿದ್ದೇನೆ. ಈ ಪ್ರಕರಣಕ್ಕೆ ಇನ್ನೂ ನಾಲ್ಕೈದು ಗಂಟೆಗಳ ಕಾಲ ವಿಸ್ತೃತ ವಿಚಾರಣೆ ಅಗತ್ಯವಿದೆ'' ಎಂದು ಜಸ್ಟಿಸ್ ಅರುಣ್ ಮಿಶ್ರಾ ಹೇಳಿದರು. ಈ ಪ್ರಕರಣದ ಮುಂದಿನ ವಿಚಾರಣೆ ಇನ್ನೊಂದು ಪೀಠದ ಮುಂದೆ ಸೆಪ್ಟೆಂಬರ್ 10ರಂದು ಬರಲಿದೆ.
“ಇದು ಶಿಕ್ಷೆಯ ಪ್ರಶ್ನೆಯಲ್ಲ, ಇದು ಸಂಸ್ಥೆಯ ಮೇಲಿನ ವಿಶ್ವಾಸದ ಪ್ರಶ್ನೆ, ಜನರು ನ್ಯಾಯಾಲಯದ ಮೊರೆ ಹೋದಾಗ ಹಾಗೂ ಅವರ ವಿಶ್ವಾಸದಲ್ಲಿ ಕೊರತೆಯೆದುರಾದಾಗ ಸಮಸ್ಯೆಯಾಗುತ್ತದೆ'' ಎಂದು ನ್ಯಾಯಾಧೀಶರು ಇಂದಿನ ವಿಚಾರಣೆ ವೇಳೆ ಹೇಳಿದರು.
ನ್ಯಾಯಾಧೀಶರುಗಳ ಭ್ರಷ್ಟಾಚಾರದ ಕುರಿತು ಉಲ್ಲೇಖ ಹಾಗೂ ಈ ಕುರಿತಾದ ಆರೋಪಗಳು ನಿಂದನೆಗೆ ಸಮವೇ ಎಂದು ಸಂವಿಧಾನಿಕ ಪೀಠ ಪರಿಶೀಲಿಸಬೇಕೆಂದು ಪ್ರಶಾಂತ್ ಭೂಷಣ್ ಅವರ ವಕೀಲ ರಾಜೀವ್ ಧವನ್ ತಮ್ಮ ವಾದ ಮಂಡನೆ ವೇಳೆ ಹೇಳಿದರು.
ಭಾರತದ 16 ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದಾರೆ ಎಂದು 2009ರಲ್ಲಿ ತೆಹಲ್ಕಾ ಮ್ಯಾಗಜೀನ್‍ಗೆ ನೀಡಿದ್ದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ಹೇಳಿರುವುದೇ ಈ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಕಾರಣವಾಗಿದೆ.







