ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ಇನ್ನೂ ನಿಂದನಾತ್ಮಕವಾಗಿತ್ತು ಎಂದ ಸುಪ್ರೀಂ ಕೋರ್ಟ್
ಹೇಳಿಕೆ ಹಿಂಪಡೆಯಲು 30 ನಿಮಿಷಗಳ ಕಾಲಾವಕಾಶ

ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಹಾಗೂ ಸುಪ್ರೀಂ ಕೋರ್ಟ್ ಕುರಿತಂತೆ ತಾವು ಮಾಡಿರುವ ಎರಡು ಟ್ವೀಟ್ ಗಳಿಗೆ ಕ್ಷಮೆಯಾಚಿಸಲು ನಿರಾಕರಿಸಿರುವ ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಿ ಕ್ಷಮಿಸಬೇಕು ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಇಂದು ಸುಪ್ರೀಂ ಕೋರ್ಟ್ ಮುಂದೆ ಹೇಳಿದ್ದಾರೆ.
“ಭವಿಷ್ಯದಲ್ಲಿ ಇದನ್ನು ದಯವಿಟ್ಟು ಪುನರಾವರ್ತಿಸಬೇಡಿ ಎಂಬ ಎಚ್ಚರಿಕೆಯೊಂದಿಗೆ ಅವರನ್ನು ಬಿಟ್ಟುಬಿಡಿ ಹಾಗೂ ಈ ಮೂಲಕ ನ್ಯಾಯಾಂಗ ನಿಂದನೆ ತಪ್ಪಿಗೆ ಶಿಕ್ಷೆ ನೀಡುವ ಅಧಿಕಾರ ಬಳಸದೆ ನಿಮ್ಮ ಮುತ್ಸದ್ದಿತನವನ್ನು ಪ್ರದರ್ಶಿಸಿ” ಎಂದು ವೇಣುಗೋಪಾಲ್ ಹೇಳಿದರು.
“ಅವರು ತಾವೇನೂ ತಪ್ಪು ಮಾಡಿಲ್ಲವೆಂದು ನಂಬಿರುವಾಗ ಎಚ್ಚರಿಕೆ ನೀಡಿ ಫಲವೇನು?, ಅವರು ನೀಡಿದ ಪ್ರತಿಕ್ರಿಯೆಯನ್ನು ನಾವು ಪರಿಗಣಿಸಿಲ್ಲ ಎಂದು ಎಲ್ಲರೂ ಟೀಕಿಸುತ್ತಿದ್ದಾರೆ. ಆದರೆ ಅವರ ಪ್ರತಿಕ್ರಿಯೆ ಇನ್ನೂ ಹೆಚ್ಚು ನಿಂದನಾತ್ಮಕವಾಗಿದೆ. ಅದನ್ನು ತೆಗೆದು ಹಾಕಿದರೆ ನಾವು ನಾವಾಗಿಯೇ ಅದನ್ನು ತೆಗೆದು ಹಾಕಿದೆವು ಎಂಬ ದೂಷಣೆಯನ್ನೂ ಎದುರಿಸಬೇಕಾಗುತ್ತದೆ” ಎಂದು ಜಸ್ಟಿಸ್ ಅರುಣ್ ಮಿಶ್ರಾ ಹೇಳಿದರು.
ಸೋಮವಾರ ತಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದ 100 ಪುಟಗಳ ಹೇಳಿಕೆಯನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಚಿಂತಿಸಲು ಪ್ರಶಾಂತ್ ಭೂಷಣ್ ಅವರಿಗೆ ಕಾಲಾವಕಾಶ ನೀಡುವ ಸಲುವಾಗಿ ಸುಪ್ರೀಂ ಕೋರ್ಟ್ ಇಂದು ಕಲಾಪಕ್ಕೆ 30 ನಿಮಿಷಗಳ ವಿರಾಮ ನೀಡಿತು. ಹೇಳಿಕೆ ಹಿಂಪಡೆಯಲು 30 ನಿಮಿಷಗಳ ಕಾಲಾವಕಾಶವನ್ನೂ ಅವರಿಗೆ ನೀಡಲಾಯಿತು.
“ನಾವು ಬೇರೆ ಹೇಳಿಕೆ ನಿರೀಕ್ಷಿಸಿದ್ದೆವು. ಏನು ಮಾಡಬೇಕೆಂದು ಹೇಳಿ'' ಎಂದು ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ಅವರನ್ನು ಕೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, “ಹಿಂದೆ ಕೂಡ ಹಲವು ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರುಗಳು ಉನ್ನತ ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಕುರಿತು ಮಾತನಾಡಿದ್ದಾರೆ. ಇದನ್ನು ಗಮನಿಸಿ ಸುಧಾರಣೆ ತರಬೇಕೆಂದು ಈ ಹೇಳಿಕೆಗಳು ನ್ಯಾಯಾಲಯಕ್ಕೆ ತಿಳಿಸುತ್ತಿವೆ'' ಎಂದು ವೇಣುಗೋಪಾಲ್ ಪ್ರತಿಕ್ರಿಯಿಸಿದರು.







