ಮಹಾರಾಷ್ಟ್ರ: ಜನವಸತಿ ಕಟ್ಟಡ ಕುಸಿತ, 10 ಮಂದಿ ಮೃತ್ಯು, 14 ಮಂದಿ ನಾಪತ್ತೆ

ರಾಯಗಢ, ಆ. 25: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾದ್ ಪ್ರದೇಶದಲ್ಲಿ ಸೋಮವಾರ ವಸತಿ ಕಟ್ಟಡವೊಂದು ಕುಸಿದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ನಾಲ್ಕು ಮಹಡಿಯ ಕಟ್ಟಡ ತಾರಿಖು ಗಾರ್ಡನ್‌ನ ಕೊನೆಯ ಮೂರು ಮಹಡಿ ಸೋಮವಾರ ಸಂಜೆ ಕುಸಿಯಿತು. ಈ ದುರ್ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದರು. ಇದುವರೆಗೆ 78 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇವರೊಂದಿಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್)ಯ ಮೂರು ತಂಡ ಕೈಜೋಡಿಸಿದೆ. ಈ ದುರ್ಘಟನೆಯಿಂದ ತಾನು ದುಃಖಿತನಾಗಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಎನ್‌ಡಿಆರ್‌ಎಫ್‌ನ ತಂಡಗಳು ಸಂತ್ರಸ್ತರಿಗೆ ಎಲ್ಲ ನೆರವು ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.





