ಗಜಗಿರಿ ಬೆಟ್ಟ ದುರಂತ: ಇನ್ನೂ ದೊರಕದ ಇಬ್ಬರ ಸುಳಿವು, ಕಾರ್ಯಾಚರಣೆ ನಿಲ್ಲಿಸಿದ ಜಿಲ್ಲಾಡಳಿತ

ಮಡಿಕೇರಿ, ಆ. 25: ಮಹಾಮಳೆಗೆ ಗಜಗಿರಿ ಬೆಟ್ಟ ಕುಸಿದು ಐವರು ನಾಪತ್ತೆಯಾದ ತಲಕಾವೇರಿ ಪ್ರದೇಶದಲ್ಲಿ ಕಳೆದ 17 ದಿನಗಳಿಂದ ಕಾರ್ಯಾಚರಣೆ ನಡೆಸಿದರೂ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಪತ್ನಿ ಶಾಂತ ಆಚಾರ್ ಹಾಗೂ ಸಹಾಯಕ ಅರ್ಚಕ ಶ್ರೀನಿವಾಸ ಅವರನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ.
ಇದೀಗ ಜಿಲ್ಲಾಡಳಿತ ಶೋಧ ಕಾರ್ಯದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲು ನಿರ್ಧರಿಸಿದೆ. 2018 ರಲ್ಲಿ ಜೋಡುಪಾಲದಲ್ಲಿ ಮಂಜುಳ ಎಂಬಾಕೆಯ ಮೃತದೇಹ ಸಿಗದೆ ಇದ್ದಾಗ ಮತ್ತು ವಿರಾಜಪೇಟೆಯ ತೋರ ಗ್ರಾಮದಲ್ಲಿ ನಾಲ್ವರ ಶವ ಶೋಧ ಅಸಾಧ್ಯವಾದಾಗ ಇದೇ ಕ್ರಮವನ್ನು ಅನುಸರಿಸಲಾಗಿತ್ತು.
ತಲಕಾವೇರಿಯಲ್ಲಿ ಕೆಲವು ದಿನಗಳ ಹಿಂದೆ ನಾರಾಯಣ ಆಚಾರ್, ಸಹೋದರ ಆನಂದತೀರ್ಥ ಹಾಗೂ ಸಹಾಯಕ ಅರ್ಚಕ ರವಿಕಿರಣ್ ಅವರುಗಳ ಮೃತದೇಹ ಮಾತ್ರ ಪತ್ತೆಯಾಗಿತ್ತು. ಪ್ರತಿಕೂಲ ವಾತಾವರಣದ ನಡುವೆಯೂ ಕಾರ್ಯಾಚರಣೆಯನ್ನು ಮುಂದುವರಿಸಿ, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿತ್ತು. ಆದರೆ ಈಗ ಅನಿವಾರ್ಯವಾಗಿ ಜಿಲ್ಲಾಡಳಿತ ಕಾರ್ಯಾಚರಣೆಯನ್ನು ಕೈ ಬಿಟ್ಟಿದೆ.
ಆ.6 ರಂದು ಬಿರುಗಾಳಿ, ಮಳೆಗೆ ಗಜಗಿರಿ ಬೆಟ್ಟ ಕುಸಿದು ಮನೆ ನೆಲಸಮಗೊಂಡು ಐವರು ನಾಪತ್ತೆಯಾಗಿದ್ದರು.







