ಬೆಂಗಳೂರು ಹಿಂಸಾಚಾರ ಪ್ರಕರಣ ಎನ್‍ಐಎ ತನಿಖೆಗೆ ಕೋರಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಆ.25: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಗಿರೀಶ್ ಭಾರದ್ವಾಜ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‍ಐಎ) ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದಿಸಿ, ಪ್ರಕರಣ ಗಂಭೀರ ಸ್ವರೂಪದ್ದಾಗಿದೆ. ಹಾಗೆಯೇ ಸಂಕೀರ್ಣವಾಗಿದ್ದು, ಗಲಭೆಯಲ್ಲಿ ಹೊರಗಿನ ವಿದ್ವಂಸಕ ಶಕ್ತಿಗಳು ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಗಲಭೆ ಪ್ರಕರಣವನ್ನು ಸ್ಥಳೀಯ ತನಿಖಾ ತಂಡಕ್ಕೆ ವಹಿಸುವ ಬದಲು ಎನ್‍ಐಎಗೆ ವಹಿಸಬೇಕೆಂದು ಕೋರಿದರು.





