ಎಪಿಎಂಸಿ ವರ್ತಕರೊಂದಿಗೆ ಶಾಸಕ ಚರ್ಚೆ

ಮಂಗಳೂರು, ಆ.25:ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿಯಲ್ಲಿಯೇ ವ್ಯಾಪಾರ ಮಾಡಲು ಬಯಸಿದ್ದಲ್ಲಿ ಎಲ್ಲಾ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಿ ರಾಜ್ಯದಲ್ಲಿಯೇ ಮಾದರಿ ಎಪಿಎಂಸಿ ಮಾಡಲಾಗುವುದು. ವ್ಯಾಪಾರಿಗಳು ಗೊಂದಲಕ್ಕೆ ಒಳಗಾಗದೆ ಇಲ್ಲಿಯೇ ವ್ಯಾಪಾರ ಮಾಡಲು ಮುಂದಾಗಬೇಕು ಎಂದು ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿದ್ದಾರೆ.
ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಮಂಗಳವಾರ ಭೇಟಿ ನೀಡಿ ವರ್ತಕರೊಂದಿಗೆ ಅವರು ಚರ್ಚೆ ನಡೆಸಿದರು.
ಜನರ ತೆರಿಗೆ ಹಣವನ್ನು ಖರ್ಚು ಮಾಡುವಾಗ ಜಾಗರೂಕತೆಯಿಂದ ಇರಬೇಕು. ಎಪಿಎಂಸಿಗೆ ಪರ್ಯಾಯ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಕೋಲ್ಡ್ ಸ್ಟೋರೇಜ್ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ, ಸಂಸದರು, ಸಚಿವರ ಜೊತೆ ಸಮಾಲೋಚನೆ ನಡೆಸ ಲಾಗಿದೆ. ವರ್ತಕರು ಇಲ್ಲಿಯೇ ವ್ಯವಹಾರ ಮಾಡಲು ಬಯಸಿದಲ್ಲಿ ಜನರ ತೆರಿಗೆಯ ಹಣ ಬಳಸಿ ಕಾಮಗಾರಿ ಮಾಡಿದಾಗ ಆ ಹಣ ಕೂಡ ಸದುಪ ಯೋಗವಾಗುತ್ತದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭ ವರ್ತಕರ ಪ್ರತಿನಿಧಿ ರಾಘವ ಶೆಟ್ಟಿ, ಬಿಜೆಪಿ ವಕ್ತಾರ ಜಗದೀಶ್ ಶೇಣವ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಭರತರಾಜ್ ಕೃಷ್ಣಾಪುರ, ಪಾಲಿಕೆ ಸದಸ್ಯ ವರುಣ್ ಚೌಟ ಉಪಸ್ಥಿತರಿದ್ದರು.





