ತಿರುವನಂತಪುರ ವಿಮಾನನಿಲ್ದಾಣದ ಖಾಸಗೀಕರಣಕ್ಕೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಕಾರ

ಕೊಚ್ಚಿ,ಆ.25: ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಗೆ ಲೀಸ್‌ಗೆ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ವಿಧಿಸಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅದಾನಿ ಎಂಟರ್‌ಪ್ರೈಸಸ್‌ಗೆ ತಿರುವನಂತಪುರ ವಿಮಾನನಿಲ್ದಾಣವನ್ನು ಲೀಸ್‌ಗೆ ನೀಡಿರುವುದಕ್ಕೆ ತಡೆಯಾಜ್ಞೆ ವಿಧಿಸಬೇಕೆಂದು ಕೋರಿ ಕೇರಳ ಸರಕಾರವು ಹೈಕೋರ್ಟ್ ಮೆಟ್ಟಲೇರಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವಿಸ್ತೃತ ವಿಚಾರಣೆಗಾಗಿ ಪ್ರಕರಣವನ್ನು ಸಪ್ಟೆಂಬರ್ 15ಕ್ಕೆ ಮುಂದೂಡಿದೆ.
ಸೆಪ್ಟೆಂಬರ್ 9ಕ್ಕೆ ಮುನ್ನ ಪ್ರಕರಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನನ್ನು ಹಾಜರುಪಡಿಸುವಂತೆಯೂ ಅದು ಕೇರಳ ಸರಕಾರಕ್ಕೆ ಸೂಚಿಸಿದೆ. ಅದಾನಿ ಎಂಟರ್‌ಪ್ರೈಸಸ್‌ಗೆ ತಿರುವನಂತಪುರ ವಿಮಾನನಿಲ್ದಾಣವನ್ನು ಲೀಸ್‌ಗೆ ನೀಡುವ ಕೇಂದ್ರ ಸಂಪುಟದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆಸರ್ವಪಕ್ಷ ಸಭೆಯು ಮೋದಿ ಸರಕಾರವನ್ನು ಆಗ್ರಹಿಸಿದ ಬಳಿಕ, ರಾಜ್ಯ ಸರಕಾರವು ನ್ಯಾಯಾಲಯದ ಮೆಟ್ಟಲೇರಿತ್ತು
ವಿಮಾನನಿಲ್ದಾಣದ ಕಾರ್ಯನಿರ್ವಹಣೆ, ಆಡಳಿತ ಹಾಗೂ ಅಭಿವೃದ್ಧಿ ಪಡಿಸುವಿಕೆ ಸೇರಿದಂತೆ ಅದಾನಿ ಎಂಟರ್‌ಪ್ರೈಸಸ್‌ಗೆ ನೀಡಲಾಗಿರುವ ಲೀಸ್‌ಗೆ ಸಂಬಂಧಿಸಿದ ಎಲ್ಲಾ ಮುಂದಿನ ಪ್ರಕ್ರಿಯೆಳಿಗೆ ತಡೆಯಾಜ್ಞೆ ನೀಡಬೇಕೆಂದು ಕೇರಳ ಸರಕಾರವು ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.







