ಫೇಸ್‌ಬುಕ್ ಅಧಿಕಾರಿಗಳಿಗೆ ಶೀಘ್ರ ಸಮನ್ಸ್: ದಿಲ್ಲಿ ವಿಧಾನಸಭೆ ಸಮಿತಿ ನಿರ್ಧಾರ

ಹೊಸದಿಲ್ಲಿ, ಆ.25: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆಡಳಿತ ಪಕ್ಷದವರು ಪೋಸ್ಟ್ ಮಾಡುವ ದ್ವೇಷ ಭಾಷಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಫೇಸ್‌ಬುಕ್ ಅಧಿಕಾರಿಗಳಿಗೆ ಶೀಘ್ರ ಸಮನ್ಸ್ ನೀಡಲು ನಿರ್ಧರಿಸಿರುವುದಾಗಿ ಆಮ್ ಆದ್ಮಿ ಪಕ್ಷದ ಶಾಸಕ ರಾಘವ ಚಡ್ಡಾ ನೇತೃತ್ವದ ದಿಲ್ಲಿ ವಿಧಾನಸಭೆ ಸಮಿತಿ ಹೇಳಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಪತ್ರಕರ್ತರಾದ ಪರಾಂಜಯ್ ಗುಹಾ ಥಕುರ್ತ, ನಿಖಿಲ್ ಪಹ್ವಾ ಮತ್ತು ರೆಜೀನಾ ಮಿಹಿಂದುಕುಲಸುರಿಯ ನೀಡಿರುವ ಹೇಳಿಕೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಫೇಸ್‌ಬುಕ್ ಭಾರತದ ಕಾರ್ಯನೀತಿ ಅಧಿಕಾರಿ ಆಂಖಿ ದಾಸ್‌ಗೆ ಬಿಜೆಪಿಯೊಂದಿಗೆ ಸಂಪರ್ಕವಿತ್ತು ಎಂದು ‘ದಿ ರಿಯಲ್ ಫೇಸ್ ಆಫ್ ಫೇಸ್‌ಬುಕ್ ಇನ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಪರಾಂಜಯ್ ಗುಹಾ ಆರೋಪಿಸಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಕಳೆದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಗಲಭೆ ಸಂದರ್ಭ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಕೆಲವು ಹೇಳಿಕೆಗಳನ್ನು ದಿಲ್ಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿ ಗಮನಿಸಿದ್ದು, ಫೇಸ್‌ಬುಕ್ ಅಧಿಕಾರಿಗಳಿಗೆ ಸಮನ್ಸ್ ನೀಡಲು ನಿರ್ಧರಿಸಿದೆ . ಯಾವ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದೆ ಎಂಬ ವಿವರ ಶೀಘ್ರ ಬಹಿರಂಗಪಡಿಸಲಾಗುವುದು ಎಂದು ಸಮಿತಿ ಹೇಳಿದೆ. ದಿಲ್ಲಿಯಲ್ಲಿ ನಡೆದಿದ್ದ ಗಲಭೆಯ ಬಗ್ಗೆ ಪರಿಶೀಲನೆ ನಡೆಸಲು ಈ ಸಮಿತಿ ರಚಿಸಲಾಗಿದೆ.
ಇದೇ ವಿಷಯದ ಬಗ್ಗೆ ಶಶಿ ಥರೂರ್ ಅಧ್ಯಕ್ಷರಾಗಿರುವ ಮಾಹಿತಿ ತಂತ್ರಜ್ಞಾನ ಕುರಿತ ಸಂಸತ್ತಿನ ಸ್ಥಾಯೀ ಸಮಿತಿ ಫೇಸ್‌ಬುಕ್ ಪ್ರತಿನಿಧಿಗಳ ಹೇಳಿಕೆಯನ್ನು ಸೆಪ್ಟೆಂಬರ್ 2ರಂದು ಆಲಿಸಲಿದೆ ಎಂದು ಮೂಲಗಳು ತಿಳಿಸಿವೆ.







