‘ಜೆಇಇ, ನೀಟ್ ಪರೀಕ್ಷೆಗಳನ್ನು ಮುಂದೂಡಿ’ ಚಳವಳಿಗೆ ಗ್ರೆಟಾ ತನ್‌ಬರ್ಗ್ ಬೆಂಬಲ

ಸ್ಟಾಕ್‌ಹೋಮ್ (ಸ್ವೀಡನ್), ಆ. 25: ‘ಜೆಇಇ ನೀಟ್ ಪರೀಕ್ಷೆಗಳನ್ನು ಮುಂದೂಡಿ’ ಎಂಬ ರಾಷ್ಟ್ರವ್ಯಾಪಿ ಚಳವಳಿಗೆ ಹದಿಹರಯದ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಮಂಗಳವಾರ ಬೆಂಬಲ ಸೂಚಿಸಿದ್ದಾರೆ.
ಕೊರೋನವೈರಸ್ ಸಾಂಕ್ರಾಮಿಕ ಮತ್ತು ಭೀಕರ ಪ್ರವಾಹಗಳಿಂದ ದೇಶ ತತ್ತರಿಸುತ್ತಿರುವಾಗ ಈ ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳಿಗೆ ‘ಬಗೆಯುವ ಘೋರ ಅನ್ಯಾಯ’ವಾಗಿರುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
‘‘ ‘ಕೋವಿಡ್-19ರ ಅವಧಿಯಲ್ಲಿ ಜೆಇಇ-ನೀಟ್ ಪರೀಕ್ಷೆಗಳನ್ನು ನಡೆಸುವುದನ್ನು ಮುಂದೂಡಿ’ ಎಂಬುದಾಗಿ ಭಾರತದಲ್ಲಿ ನಡೆಯುತ್ತಿರುವ ಚಳವಳಿಗೆ ನಾನು ಬೆಂಬಲ ಸೂಚಿಸುತ್ತೇನೆ’’ ಪರಿಸರ ಹೋರಾಟಗಾರ್ತಿ ಟ್ವೀಟ್ ಮಾಡಿದ್ದಾರೆ. ಅವರು ಟ್ವಿಟರ್‌ನಲ್ಲಿ 41 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
ಟ್ವಿಟರ್‌ನಲ್ಲಿ ಈಗಾಗಲೇ ‘ಮೋದೀಜಿ-ಜೆಇಇನೀಟ್ ಮುಂದೂಡಿ’ ಎಂಬ ಹ್ಯಾಶ್‌ಟ್ಯಾಗ್ ಈಗಾಗಲೇ ಟ್ರೆಂಡಿಂಗ್ ಆಗುತ್ತಿದೆ.
ಐಐಟಿ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ಮುಂದೂಡಿ ಎಂಬ ಚಳವಳಿಗೆ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಹೆತ್ತವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಮ್, ಬಿಹಾರ, ಗುಜರಾತ್, ಛತ್ತೀಸ್‌ಗಢ, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿರುವಾಗ ಈ ಮಹತ್ವದ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







