ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಕಾಂಗ್ರೆಸ್ ಒಳಜಗಳವೇ ಕಾರಣ: ಎಸ್‍ಡಿಪಿಐ ಆರೋಪ

ಬೆಂಗಳೂರು, ಆ.25: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಕಾಂಗ್ರೆಸ್ ಒಳಜಗಳವೇ ಪ್ರಮುಖ ಕಾರಣ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಒಳ ಜಗಳವೇ ಗಲಭೆಗೆ ಮೂಲ ಕಾರಣ. ಮಾಜಿ ಮೇಯರ್ ಸಂಪತ್ ರಾಜ್, ಅವರ ಆಪ್ತ ಅರುಣ್ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಡುವಿನ ಜಗಳವೇ ಮೂಲ ಕಾರಣ. ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ಪೊಲೀಸರ ಮೇಲೆ ಒತ್ತಡ ಹಾಕುವುದು ಬೇಡ ಎಂದು ಕಾಂಗ್ರೆಸ್ ನಾಯಕರಿಂದ ಒತ್ತಡ ತಂತ್ರ ಮಾಡಲಾಗುತ್ತಿದೆ. ಸರಕಾರ ಜಾಣಮೌನ ವಹಿಸುತ್ತಿದೆ. ಗಲಭೆಯಲ್ಲಿ ನಡೆದ ಗುಂಡೇಟು ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಡಿ.ಜೆ. ಹಳ್ಳಿ ಪ್ರಕರಣದಲ್ಲಿ ಎಸ್‍ಡಿಪಿಐ ಪಾತ್ರವಿದೆ ಎಂದು ಆರೋಪಿಸಲಾಗುತ್ತಿದೆ. ನವೀನ್‍ಗೆ ವ್ಯಂಗ್ಯಚಿತ್ರ ಕೊಟ್ಟವರು ಯಾರು? ಇದರ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ. ನವೀನ್‍ನನ್ನು ಎಲ್ಲಿಂದ ಬಂಧಿಸಲಾಯಿತು ಎಂದು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಎಸ್‍ಡಿಪಿಐ ಅನ್ನು ಯಾಕೆ ನಿಷೇಧ ಮಾಡಬೇಕು. 13 ಕೊಲೆ ಆರೋಪ ನಮ್ಮ ಮೇಲೆ ಹೊರಿಸಿದ್ದಾರೆ. ಕಾಂಗ್ರೆಸ್ ಮತ್ತು ಸಂಘ ಪರಿವಾರ ಮಾಡಿರುವ ಕೊಲೆಗಳ ಪಟ್ಟಿ ನಮ್ಮಲ್ಲಿದೆ. ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ದೊಡ್ಡ ಗಾಂಜಾ ದಂಧೆಯೇ ಇದೆ. ಇದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ. ಇದರ ಹಿಂದೆ ಯಾರಿದ್ದಾರೆ ಅಂತ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.







