ಕೋವಿಡ್ ನಿಯಂತ್ರಣಕ್ಕೆ ಪರೀಕ್ಷೆಗಳನ್ನು ಹೆಚ್ಚಿಸಲು ತಜ್ಞರ ಶಿಫಾರಸ್ಸು

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.25: ಕೋವಿಡ್ 19 ಶೀಘ್ರವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡುವುದಕ್ಕೆ, ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಪ್ರಯೋಗಶಾಲಾ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು(ತಾಂತ್ರಿಕ ಸಲಹಾ ಸಮಿತಿ) ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾಲಯ(ಕ್ಲಿನಿಕಲ್ ತಜ್ಞರ ಸಮಿತಿ)ಗಳ ಸಂಯುಕ್ತ ತಜ್ಞರ ಸಮಿತಿ ಸಭೆ ಶಿಫಾರಸ್ಸು ಮಾಡಿದೆ.
ಕರ್ನಾಟಕದಲ್ಲಿ ಪ್ರಸ್ತುತ ಪ್ರತಿ ದಶಲಕ್ಷ ಜನರಿಗೆ 34,659 ಜನರ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ದೃಢಪಟ್ಟವರ ದರವು ಶೇ.11.5 ರಷ್ಟಿದೆ. ಭಾರತದಲ್ಲಿ ದಿಲ್ಲಿಯಂತಹ ಇತರೆ ರಾಜ್ಯಗಳು ಪ್ರತಿ ದಶಲಕ್ಷ ಜನರಿಗೆ 70,871 ಜನರ ಪರೀಕ್ಷೆ ಮಾಡುತ್ತಿದ್ದು, ಆಂಧ್ರದಲ್ಲಿ ಪ್ರತಿ ದಶಲಕ್ಷ ಜನರಿಗೆ 61,672 ಜನರ ಪರೀಕ್ಷೆ ಮಾಡಲಾಗುತ್ತಿದೆ. ದಕ್ಷಿಣ ಕೊರಿಯಾ, ಜರ್ಮನಿ, ನ್ಯೂಜಿಲ್ಯಾಂಡ್ ಅಂತಹ ದೇಶಗಳು ಪರಿಣಾಮಕಾರಿ ಪ್ರಯೋಗಶಾಲಾ ಪರೀಕ್ಷೆಗಳ ಹಾಗೂ ಇತರ ನಿಯಂತ್ರಣ ಕ್ರಮಗಳ ಮೂಲಕ ಏರುಗತಿಯ ಆಲೇಖವನ್ನು ಸಮತಟ್ಟು ಮಾಡಿ ನಿರ್ವಹಿಸುತ್ತಿದ್ದಾರೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಕೊರೋನ ಸೋಂಕು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಾವು ಪ್ರತಿ ದಶಲಕ್ಷ ಜನರಿಗೆ 75 ಸಾವಿರದಿಂದ ಒಂದು ಲಕ್ಷದಷ್ಟು ಗಣನೀಯವಾಗಿ ಪ್ರಯೋಗ ಶಾಲಾ ಪರೀಕ್ಷೆಗಳ ಸಂಖ್ಯೆಯನ್ನು ಕ್ರಮೇಣವಾಗಿ ಹೆಚ್ಚಿಸಬೇಕಾಗಿದೆ. ಪರೀಕ್ಷೆಗಳ ಗುರಿಯನ್ನು ನಿಗದಿ ಪಡಿಸುವ ಬದಲಿಗೆ ಸಂಶಯಾಸ್ಪದ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆಯನ್ನು ಕಟ್ಟುನಿಟ್ಟಾದ ಟ್ರೇಸಿಂಗ್ ಹಾಗು ಟ್ರ್ಯಾಕಿಂಗ್ ಪ್ರಕ್ರಿಯೆಯನ್ನು ಬಲಪಡಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಶೀಘ್ರ ಚಿಕಿತ್ಸೆ ಹಾಗೂ ರೋಗ ತೀವ್ರತೆಯನ್ನು ತಡೆಗಟ್ಟಲು ಸುಲಭವಾಗಿ ರೋಗಕ್ಕೆ ತುತ್ತಾಗಬಲ್ಲ ಜನಸಮುದಾಯ ಹಾಗೂ ಗಂಡಾಂತರದಲ್ಲಿರುವ ಗುಂಪುಗಳ ಪರೀಕ್ಷೆಗೆ ಆದ್ಯತೆ ನೀಡಲು ಸಲಹೆ ನೀಡಲಾಗಿದ್ದು, ಪರೀಕ್ಷೆಗಳನ್ನು ಹಂತ ಹಂತವಾಗಿ ಹೆಚ್ಚಿಸಲು ಮೂರು ಹಂತದಲ್ಲಿ ಆದ್ಯತೀಕರಿಸಲಾಗಿದೆ.
ಆದ್ಯತೆ 1: ಹೆಚ್ಚಿನ ಗಂಡಾಂತರ: ಎಸ್ಎಆರ್ಐ ಇರುವ ರೋಗಿಗಳು, ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳು; ಐಎಲ್ಐ, ವಾಸನೆ ತಿಳಿಯದಿರುವಿಕೆ, ಶರೀರದಲ್ಲಿ ನೋವು, ದುರ್ಬಲತೆ, ಉಸಿರಾಟದಲ್ಲಿ ತೊಂದರೆ, ರೋಗ ಲಕ್ಷಣಗಳಿರುವ ಆರೋಗ್ಯ ಸಿಬ್ಬಂದಿ, ಹೆಚ್ಚಿನ ಗಂಡಾಂತರ ಅಥವಾ ಮೊದಲ ಸಂಪರ್ಕಿತರು ಇದರಲ್ಲಿ ಬರುತ್ತಾರೆ.
ಆದ್ಯತೆ 2: ಮಧ್ಯಮ ಗಂಡಾಂತರ: ಕಂಟೈನ್ಮೆಂಟ್ ಝೋನ್ನಲ್ಲಿರುವ ವ್ಯಕ್ತಿಗಳು, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿರುವ ಹಿರಿಯರು ಮತ್ತು ಸುಲಭವಾಗಿ ರೋಗಕ್ಕೆ ತುತ್ತಾಗಬಲ್ಲ ಜನಸಮುದಾಯ, ಇತರೆ ಸಹರೋಗಗಳಿರುವ ವ್ಯಕ್ತಿಗಳು, ಕೋವಿಡ್ ಬಾಧಿತ ಪ್ರದೇಶಗಳಿಂದ ಪ್ರಯಾಣ ಮಾಡಿರುವ ಹಿನ್ನೆಲೆಯುಳ್ಳವರು ಇದರಲ್ಲಿ ಬರುತ್ತಾರೆ.
ಆದ್ಯತೆ 3: ಕಡಿಮೆ ಗಂಡಾಂತರ: ಗರ್ಭಿಣಿ ಸ್ತ್ರೀಯರು, ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ಬರುತ್ತಿರುವವರು, ತರಕಾರಿ ಮಾರುಕಟ್ಟೆ ವ್ಯಾಪಾರಿಗಳು, ಬಸ್ ಕಂಡಕ್ಟರ್ ಗಳು ಹಾಗೂ ಆಟೋ ಚಾಲಕರು, ಗುಂಪು ಸೇರುವ ಪ್ರದೇಶಗಳು; ಮಾರುಕಟ್ಟೆಗಳು, ಮಾಲ್ಗಳು, ಚಿಲ್ಲರೆ ಮಾರಾಟ ಅಂಗಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಪೌರ ಕಾರ್ಮಿಕರು ಇದರಲ್ಲಿ ಬರಲಿದ್ದಾರೆ ಎಂದು ಸಮಿತಿ ತಿಳಿಸಿದೆ.
ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳನ್ನು ಮೌಲ್ಯಮಾಪನ ಮಾಡುವುದರ ಅಗತ್ಯವಿದೆ. ಅಲ್ಲದೆ, ಬಯಸಿದ ಗುರಿಯನ್ನು ಸಾಧಿಸಬೇಕಾದರೆ ಅಗತ್ಯ ಸಂಪನ್ಮೂಲಗಳಾದ ಮಾನವ ಸಂಪನ್ಮೂಲ, ಪರಿಕರಗಳು, ಸಾರಿಗೆ, ತರಬೇತಿ ಇತ್ಯಾದಿಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಲಹೆ ನೀಡಲಾಗಿದೆ.
ಸಮಾಜದ ಕೆಲವು ನಿಗದಿತ ಪಂಗಡಗಳಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವುದಕ್ಕೆ ಭಯ ಪಡುವುದು ಕಂಡುಬಂದಿದೆ. ಪ್ರಯೋಗಶಾಲಾ ಪರೀಕ್ಷೆಗಳನ್ನು ಹೆಚ್ಚಿಸುವ ಸಲುವಾಗಿ ಜನರಲ್ಲಿ ಭಯವನ್ನು ಹೋಗಲಾಡಿಸಲು, ಅವರಿಗೆ ಧೈರ್ಯ ತುಂಬಲು ಹಾಗೂ ಪರೀಕ್ಷೆಗೆ ಒಳಪಡುವಂತೆ ಉತ್ತೇಜಿಸಲು ಮಾಧ್ಯಮಗಳನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಜನರ ಮನೆ ಬಾಗಿಲಿನಲ್ಲಿ ಪರೀಕ್ಷೆ ಮಾಡುವ ಕ್ರಮಗಳನ್ನು ಒಯ್ಯಲು ಸ್ಥಳೀಯ ಆರೋಗ್ಯಾಧಿಕಾರಿಗಳು ಎಲ್ಲ ಉಪಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೈಗೊಂಡ ಎಲ್ಲ ಕ್ರಮಗಳ ಮಾಹಿತಿಯನ್ನು ಜನರಿಗೆ ಮನದಟ್ಟಾಗುವಂತೆ ತಿಳಿಸಬೇಕು ಎಂದು ಸಲಹೆ ನೀಡಲಾಗಿದೆ.







