ಬೆಂಗಳೂರಿನಲ್ಲಿ 2,294 ಮಂದಿಗೆ ಕೊರೋನ ಸೋಂಕು ದೃಢ; 61 ಮಂದಿ ಮೃತ್ಯು
ಇದುವರೆಗೆ 74 ಸಾವಿರಕ್ಕೂ ಅಧಿಕ ಮಂದಿ ಗುಣಮುಖ

ಬೆಂಗಳೂರು, ಆ.25: ನಗರದಲ್ಲಿ ಮಂಗಳವಾರ ಒಂದೇ ದಿನ 2,294 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 61 ಜನರು ಮೃತರಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 1,12,087 ಸೋಂಕಿತರು ಧೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,755 ಜನರು ಸೋಂಕಿಗೆ ಬಲಿಯಾಗಿದ್ದಾರೆ. 74,901 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಮಂಗಳವಾರ 1,538 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 35,430 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,48,955 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಸೋಮವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 15,723 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 40,563 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.
ಕೊರೋನ ನಿಯಮ ಉಲ್ಲಂಘಿಸಿದ ಮನೆ ಮಂದಿ
ಹೋಂ ಐಸೋಲೇಷನ್‍ನಲ್ಲಿರುವವರು ಮನೆಗೆ ಹಾಕಿರುವ ಭಿತ್ತಿಪತ್ರವನ್ನು ಹರಿದು ಹಾಕಿ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ.
ಮಂಜುನಾಥ ನಗರದ 5ನೇ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒಂದು ಮನೆಯಲ್ಲಿ 8 ಸದಸ್ಯರು ಹಾಗೂ ಇನ್ನೊಂದು ಮನೆಯಲ್ಲಿ 4 ಸದಸ್ಯರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ. ಹೀಗಾಗಿ 14 ದಿನ ಮನೆಗೆ ಯಾರೂ ಭೇಟಿ ನೀಡದಿರಿ ಎಂದು ಬರೆದಿರುವ ಜಾಗೃತಿಯ ಭಿತ್ತಿಪತ್ರವನ್ನು ಮನೆಯವರೇ ಹರಿದುಹಾಕುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಮಂಜುನಾಥ ನಗರದ ಆರೋಗ್ಯಾಧಿಕಾರಿಗಳು ಸೋಂಕಿತರಿಗೆ ಎಚ್ಚರಿಕೆ ನೀಡಿದರು. ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಭಿತ್ತಿಪತ್ರ ಹಾಕಲಾಗಿದೆ. ಮತ್ತೊಮ್ಮೆ ಈ ರೀತಿ ಪೋಸ್ಟರ್ ಹರಿದು ಹಾಕಿದರೆ ತಮ್ಮ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸಿಬ್ಬಂದಿಗಳಿಗೆ ಟಾರ್ಗೆಟ್: ಆರೋಪ
ಬೆಂಗಳೂರು ನಗರದಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೊದಲು ಪ್ರತಿದಿನ 250 ಪರೀಕ್ಷೆಗಳನ್ನು ಮಾಡಬೇಕು ಎಂದು ಹೇಳಲಾಗಿತ್ತು. ಬಳಿಕ ಅದನ್ನು 500ಕ್ಕೆ ಏರಿಕೆ ಮಾಡಲಾಗಿದೆ. ಆದರೆ, ಇದು ಸಾಧ್ಯವಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಸೋಂಕಿತರ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳು ಪರೀಕ್ಷೆಗೆ ಒಳಪಡಬೇಕು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ಪರೀಕ್ಷೆ ಕೈಗೊಂಡಾಗ ಬೇರೆ ಜನರು ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಒಂದು ಕಡೆ ಸ್ವಾಬ್ ಸಂಗ್ರಹ ಮಾಡಲು ಅನುಭವ ಹೊಂದಿರುವ ಸಿಬ್ಬಂದಿ ಕೊರತೆ ಇದೆ. ಮತ್ತೊಂದು ಕಡೆ ಲ್ಯಾಬ್ ಟೆಕ್ನಿಶಿಯನ್ ಕೊರತೆ ಇದೆ. ಇಂತಹ ಸನ್ನಿವೇಶದಲ್ಲಿ 500 ಮಾದರಿಗಳ ಪರೀಕ್ಷೆ ಹೇಗೆ ಎಂಬುದು ಸಿಬ್ಬಂದಿಗಳ ಪ್ರಶ್ನೆ. ತಳ ಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಟಾರ್ಗೆಟ್ ನೀಡಲಾಗುತ್ತಿದೆ. ಇದರಿಂದಾಗಿ ಸಿಬ್ಬಂದಿಗಳ ಮೇಲೆ ಒತ್ತಡ ಬೀಳುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.







