ನಂಜನೂಡು ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ಪ್ರಾದೇಶಿಕ ಆಯುಕ್ತರಿಂದ ತನಿಖೆ ಆರಂಭ

ಡಾ.ಎಸ್.ಆರ್.ನಾಗೇಂದ್ರ
ಮೈಸೂರು,ಆ.25: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಮಂಗಳವಾರ ನಂಜನಗೂಡಿಗೆ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ನಂಜನಗೂಡು ತಾಲೂಕಿನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು.
ಮೊದಲಿಗೆ ನಂಜನಗೂಡು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಕೋವಿಡ್-19 ನಿಯಂತ್ರಣ ಸಂಬಂಧಪಟ್ಟಂತೆ ತಾಲೂಕಿನಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ಪಡೆದರು. ನಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ರಿಂದ ಕೊರೋನ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಡಾ.ಎಸ್.ಆರ್.ನಾಗೇಂದ್ರ ಅವರ ಜವಾಬ್ದಾರಿ ಕುರಿತು ಮಾಹಿತಿ ಪಡೆದರು.
ಇದೇ ವೇಳೆ ತಾ.ಪಂ.ಕಚೇರಿಯಲ್ಲಿ ಸಭೆ ನಡೆಸಿದ ಅವರು ತಾ.ಪಂ.ಇಒ ಶ್ರೀಕಂಠೇರಾಜೇ ಅರಸ್ ಅವರಿಂದಲೂ ಕೊರೋನ ಸಂಬಂಧಪಟ್ಟ ಮಾಹಿತಿಯನ್ನು ಕಲೆ ಹಾಕಿದರು.
ನಂಜನೂಡು ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ.ಎಸ್.ಆರ್.ನಾಗೇಂದ್ರ ಅವರು ಆ.20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕುಟುಂಬಸ್ಥರು ಮತ್ತು ವೈದ್ಯಾಧಿಕಾರಿಗಳ ಸಂಘದವರು ಪ್ರತಿಭಟನೆ ನಡೆಸಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ ಏಳು ದಿನಗಳೊಳಗಾಗಿ ವರದಿ ನೀಡುವಂತೆ ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು ತನಿಖೆ ಆರಂಭಿಸಿದ್ದಾರೆ.







