ಕೇಂದ್ರ ಮಾರುಕಟ್ಟೆ ಮರು ಸ್ಥಾಪಿಸಲು ದ.ಕ. ಜಿಲ್ಲಾಧಿಕಾರಿಗೆ ಯುನಿವೆಫ್ ಮನವಿ

ಮಂಗಳೂರು, ಆ.25: ನಗರದ ಹೃದಯ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆಯನ್ನು ಕೋವಿಡ್ 19 ಸಂದರ್ಭ ಬೈಕಂಪಾಡಿಗೆ ಸ್ಥಳಾಂತರಿಸಿದ ಪ್ರಕ್ರಿಯೆಯನ್ನು ಕೈಬಿಟ್ಟು ಅಲ್ಲೇ ಮರುಸ್ಥಾಪಿಸುವಂತೆ ಯುನಿವೆಫ್ ಕರ್ನಾಟಕ ನಿಯೋಗವು ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ದ.ಕ.ಜಿಲ್ಲೆಯ ಪ್ರಮುಖ ಆರ್ಥಿಕ ಕೇಂದ್ರಗಳಾದ ಬಂದರ್ ಮೀನಿನ ಧಕ್ಕೆ ಮತ್ತು ಕೇಂದ್ರ ಮಾರುಕಟ್ಟೆಯಲ್ಲಿ ವ್ಯವಹಾರ ಸ್ಥಬ್ಧಗೊಂಡಿರುವುದರಿಂದ ಜಿಲ್ಲೆಯ ಆರ್ಥಿಕತೆಯ ಮೇಲೆ ದೊಡ್ಡ ಪ್ರಹಾರ ಬಿದ್ದಿದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕೋವಿಡ್-19 ನೆಪದಲ್ಲಿ ನಗರದ ಕೇಂದ್ರ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸದೆ ಕೆಲವು ನಿಯಮಗಳನ್ನು ಜಾರಿಗೊಳಿಸಿ ಅಲ್ಲೇ ವ್ಯಾಪಾರಕ್ಕೆ ಅನುವು ಮಾಡಬಹುದಾಗಿತ್ತು. ಆದರೆ ಸ್ಥಳಾಂತರಗೊಂಡಿರುವ ಎಪಿಎಂಸಿಯಲ್ಲ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ವ್ಯಾಪಾರಸ್ಥರು, ಗ್ರಾಹಕರು ಸಮಸ್ಯೆ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಬೈಕಂಪಾಡಿಯ ಬದಲು ನಗರದಲ್ಲೇ ಮಾರುಕಟ್ಟೆಯನ್ನು ಮರುಸ್ಥಾಪಿಸಬೇಕು ಎಂದು ಯುನಿವೆಫ್ ಕರ್ನಾಟಕ ಆಗ್ರಹಿಸಿದೆಯಲ್ಲದೆ ಸುರಕ್ಷಿತ ಅಂತರ ಕಾಪಾಡಲು ರಖಂ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕಾರ್ಯದರ್ಶಿ ಯು.ಕೆ.ಖಾಲಿದ್ ಮತ್ತು ಹುಝೈಫ್ ಕುದ್ರೋಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.





