ಸೆ. 14ರಿಂದ ಅ. 1ರ ವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ಹೊಸದಿಲ್ಲಿ, ಆ. 25: ಸಂಸತ್ತಿನ ಮುಂಗಾರು ಅಧಿವೇಶನ ಸೆಪ್ಟಂಬರ್ 14ರಿಂದ ಅಕ್ಟೋಬರ್ 1ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಎರಡೂ ಸದನಗಳ ಕಲಾಪಕ್ಕೆ ಶನಿವಾರ ಹಾಗೂ ರವಿವಾರ ರಜೆ ಇಲ್ಲ ಎಂದು ಅವು ತಿಳಿಸಿವೆ.
ಉಭಯ ಸದನಗಳಲ್ಲಿ ಪ್ರತಿ ದಿನ 4 ಗಂಟೆಗಳ ಕಾಲ ಕಲಾಪ ನಡೆಯಲಿದೆ. ಒಂದು ಅಧಿವೇಶನ ಬೆಳಗ್ಗೆ ಹಾಗೂ ಇನ್ನೊಂದು ಅಧಿವೇಶನ ಅಪರಾಹ್ನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯ ಸಭೆಯ ಉಭಯ ಸದನಗಳ ಕೊಠಡಿ ಹಾಗೂ ಗ್ಯಾಲರಿಗಳನ್ನು ಕೊರೋನ ಸೋಂಕಿನಿಂದ ರಕ್ಷಿಸುವ ಹಿನ್ನೆಲೆಯಲ್ಲಿ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ.
ವೈರಸ್ ಹಾಗೂ ಕ್ರಿಮಿಗಳನ್ನು ಕೊಲ್ಲಲು ರಾಜ್ಯಸಭೆಯ ಹವಾನಿಯಂತ್ರಿತ ಕೊಠಡಿಗಳಿಗೆ ಅಲ್ಟ್ರಾವಯಲೆಟ್ ವಿಕಿರಣ ವ್ಯವಸ್ಥೆ ಅಳವಡಿಸುವ ಪ್ರಸ್ತಾಪ ಇದೆ. ಕೊಠಡಿಗಳಲ್ಲಿ ನಾಲ್ಕು 85 ಇಂಚಿನ ಪ್ರದರ್ಶನ ಪರದೆ ಹಾಗೂ ನಾಲ್ಕು ಗ್ಯಾಲರಿಗಳಲ್ಲಿ 40 ಇಂಚಿನ ಪ್ರದರ್ಶನ ಪರದೆ, ಶ್ರಾವ್ಯ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮುಂಗಾರು ಅಧಿವೇಶನ ಹಲವು ಪ್ರಥಮಕ್ಕೆ ಹಾಗೂ ವಿಶೇಷ ಕ್ರಮಗಳಿಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.







