ರಾಜ್ಯದ 20 ಪ್ರತಿಷ್ಠಿತ ದೇವಾಲಯಗಳ ಆದಾಯ ಗಣನೀಯ ಪ್ರಮಾಣದಲ್ಲಿ ಕಡಿತ

ಬೆಂಗಳೂರು, ಆ.25: ರಾಜ್ಯದ ಪ್ರತಿಷ್ಠಿತ 20 ದೇಗುಲಗಳಿಗೆ ಕೊರೋನ ಶಾಕ್ ಕೊಟ್ಟಿದ್ದು, ಭಕ್ತರು ದೇವರು, ದೇವಸ್ಥಾನಗಳಿಂದ ದೂರ ಉಳಿದಿದ್ದಾರೆ. ಅದರ ಪರಿಣಾಮ ದೇವಾಲಯಗಳ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತಗೊಂಡಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬರುತ್ತಿದ್ದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ತಿಂಗಳಿಗೆ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದ ಮುಜರಾಯಿ ಇಲಾಖೆಗೆ, ಕಳೆದ 4 ತಿಂಗಳಲ್ಲಿ ಕೇವಲ 18 ಕೋಟಿ ಆದಾಯ ಬಂದಿದೆ. ಕಳೆದ ವರ್ಷ 317 ಕೋಟಿ ಆದಾಯ ಗಳಿಸಿದ್ದವು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2019 ರಲ್ಲಿ 98.92 ಕೋಟಿ, 2020 ರಲ್ಲಿ 4.28 ಕೋಟಿಗೆ ಇಳಿಕೆಯಾಗಿದೆ. ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ 2019 ರಲ್ಲಿ 45.65 ಕೋಟಿ, 2020 ರಲ್ಲಿ 4.51 ಕೋಟಿಗೆ ಇಳಿಕೆಯಾಗಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿ 2019 ರಲ್ಲಿ 35.23 ಕೋಟಿ ಆದಾಯವಿದ್ದರೆ 2020 ರಲ್ಲಿ 7.4 ಕೋಟಿಗೆ ಇಳಿದಿದೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 25.42 ಕೋಟಿ ಇದ್ದದ್ದು 1.05 ಕೋಟಿಗೆ, ನಂಜನಗೂಡು ದೇವಸ್ಥಾನದಲ್ಲಿ 20.80 ಕೋಟಿ ಇದ್ದ ಆದಾಯ 1.25 ಕೋಟಿಗೆ, ಸವದತ್ತಿ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ 16.49 ಕೋಟಿ ಆದಾಯವಿದ್ದದ್ದು, 2020 ರಲ್ಲಿ 1.67 ಕೋಟಿಗೆ, ಬನಶಂಕರಿ ದೇವಸ್ಥಾನದಲ್ಲಿ 2019 ರಲ್ಲಿ 9.04 ಇದ್ದ ಆದಾಯ 2020 ರಲ್ಲಿ 1.03 ಕೋಟಿಗೆ ಇಳಿಕೆಯಾಗಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.







