ಪತ್ರಕರ್ತರು ಕೊರೋನದಿಂದ ಸಾಯುವ ಸಾಧ್ಯತೆ ಇದೆ ಎಂದ ಬ್ರೆಝಿಲ್ ಅಧ್ಯಕ್ಷ ಬೊಲ್ಸೊನಾರೊ!

ಸಾವೋಪೌಲೊ (ಬ್ರೆಝಿಲ್), ಆ. 25: ಸೋಮವಾರ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ, ಪತ್ರಕರ್ತರ ವಿರುದ್ಧದ ದಾಳಿಯನ್ನು ಮುಂದುವರಿಸಿದ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ಪತ್ರಕರ್ತರು ‘ದೈಹಿಕವಾಗಿ ದುರ್ಬಲರು’ ಎಂದು ಬಣ್ಣಿಸಿದ್ದಾರೆ. ‘‘ಅವರು ಗಟ್ಟಿಮುಟ್ಟಾದ ದೇಹಗಳನ್ನು ಹೊಂದಿಲ್ಲ, ಹಾಗಾಗಿ, ಅವರು ಕೊರೋನ ವೈರಸ್‌ನಿಂದಾಗಿ ಸಾಯುವ ಸಾಧ್ಯತೆ ಗರಿಷ್ಠವಾಗಿದೆ’’ ಎಂದು ಹೇಳಿದ್ದಾರೆ.
ಸೇನೆಯ ಮಾಜಿ ಕ್ಯಾಪ್ಟನ್ ಆಗಿರುವ ಕಡು ಬಲಪಂಥೀಯ ಬೊಲ್ಸೊನಾರೊ, ಪತ್ರಕರ್ತರೊಂದಿಗೆ ಹಿಂದಿನಿಂದಲೂ ಕಹಿ ಸಂಬಂಧವನ್ನು ಹೊಂದಿದ್ದಾರೆ. ಅವರು ಕೆಲವು ನಿರ್ದಿಷ್ಟ ಪತ್ರಿಕೆಗಳು ಮತ್ತು ಪತ್ರಕರ್ತರ ವಿರುದ್ಧ ತನ್ನ ಕೋಪವನ್ನು ತೋರ್ಪಡಿಸುತ್ತಲೇ ಬಂದಿದ್ದಾರೆ. ಅವರ ಬೆಂಬಲಿಗರು ಕೂಡ ಸಭೆಗಳು ಮತ್ತು ಸಾರ್ವನಿಕ ಸಮಾರಂಭಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.
‘‘ನಾನು ನಿಮ್ಮ ಮುಖಕ್ಕೆ ಪದೇ ಪದೇ ಗುದ್ದಲು ಬಯಸುತ್ತೇನೆ’’ ಎಂದು ರವಿವಾರ ಬೊಲ್ಸೊನಾರೊ ಪತ್ರಕರ್ತರೊಬ್ಬರಿಗೆ ಹೇಳಿದರು. ದೇಶದ ಭ್ರಷ್ಟಾಚಾರ ಹಗರಣವೊಂದರಲ್ಲಿ ಅವರ ಪತ್ನಿಯ ಪಾತ್ರದ ಬಗ್ಗೆ ಆ ಪತ್ರಕರ್ತ ಪ್ರಶ್ನಿಸಿದಾಗ ಅವರು ಈ ರೀತಿಯಾಗಿ ಕೋಪದಿಂದ ಪ್ರತಿಕ್ರಿಯಿಸಿದ್ದರು.
ನಾನು ಹಿಂದೆ ಅಥ್ಲೀಟ್ ಆಗಿದ್ದುದರಿಂದ ಇತ್ತೀಚೆಗೆ ಕೊರೋನ ವೈರಸ್ ವಿರುದ್ಧ ಹೋರಾಡುವುದು ಸುಲಭವಾಯಿತು ಎಂದು ಸೋಮವಾರ ನಡೆದ ‘‘ಕೊರೋನ ವೈರಸನ್ನು ಸೋಲಿಸುವುದು’’ ಎಂಬ ವಿಷಯದ ಕುರಿತ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.
‘‘ನಾನು ಅಥ್ಲೀಟ್ ಆಗಿದ್ದೆ ಎಂದು ಹೇಳಿದಾಗ ಪತ್ರಿಕೆಗಳು ತಮಾಷೆ ಮಾಡಿವೆ. ಆದರೆ, ನಿಮ್ಮಂಥ ಬೊಜ್ಜು ದೇಹದ ಪತ್ರಕರ್ತರಿಗೆ ಕೊರೋನ ವೈರಸ್ ಬಂದರೆ ನೀವು ಬದುಕುವ ಸಂಭವನೀಯತೆ ಅತ್ಯಲ್ಪ’’ ಎಂದು ಬೊಲ್ಸೊನಾರೊ ಹೇಳಿದರು.







