ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಬಾಲಕಿಯ ಹತ್ಯೆ: ಆರೋಪಿಗಳ ಬಂಧನ

ಗುಂಡ್ಲುಪೇಟೆ, ಆ.25: ಐದು ವರ್ಷ ಬಾಲಕಿಯನ್ನು ಮನೆಯವರು ಹತ್ಯೆ ಮಾಡಿರುವ ಘಟನೆ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಮಹದೇವಸ್ವಾಮಿ ಹಾಗೂ ಗೌರಮ್ಮ ಎಂಬವರ ಪುತ್ರಿ ಮಹಾಲಕ್ಷ್ಮೀ(5) ಮೃತಪಟ್ಟ ಬಾಲಕಿ. ಮಹದೇವಸ್ವಾಮಿಯ ಎರಡನೆ ಪತ್ನಿ ರತ್ನಮ್ಮ ಎಂಬವರು ಸೋಮವಾರ ಮಧ್ಯಾಹ್ನ ಬಾಲಕಿ ಮಹಾಲಕ್ಷ್ಮೀಯನ್ನು ತನ್ನ ಮನೆಗೆ ಕರೆದೊಯ್ದು ತುಂಬಿದ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ಬಳಿಕ ಗಂಡನ ಸಹಕಾರದಿಂದ ಪ್ಲಾಸ್ಟಿಕ್ ಚೀಲಕ್ಕೆ ಮೃತದೇಹವನ್ನು ತುಂಬಿ ದೇವರ ಮನೆಯಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ.
ಹುಡುಕಾಟ ನಡೆಸಿದರೂ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಮಹದೇವಸ್ವಾಮಿ ಮನೆಯವರು ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಪಿಎಸ್ಸೈ ರಾಧಾ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಮಗುವಿನ ಮೃತ ದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪಾಲಕರ ವಶಕ್ಕೆ ನೀಡಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಡಿವೈಎಸ್ಪಿ ಮೋಹನ್, ಸರ್ಕಲ್ ಇನ್‌ಸ್ಪೆಪೆಕ್ಟರ್ ಮಹದೇವಸ್ವಾಮಿ ತೆರಳಿ ಪರಿಶೀಲಿಸಿದರು.
ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಯುಂಟಾಗಿರುವುದರಿಂದ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.







