ಸರಕಾರ ಲಾಕ್‌ಡೌನ್ ಹೇರಿದ್ದರಿಂದ ಆರ್ಥಿಕತೆಗೆ ಸಮಸ್ಯೆ ಉಂಟಾಯಿತು: ಸುಪ್ರೀಂ ಕೋರ್ಟ್
“ಲಾಕ್‌ಡೌನ್ ಮಾಡಿದವರು ನೀವೇ, ಈಗ ನೀವೇ ಪರಿಹಾರ ನೀಡಬೇಕು”

ಹೊಸದಿಲ್ಲಿ, ಆ. 26: ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಿಕೆಯ ಕೇಂದ್ರ ಸರಕಾರದ ನಿರ್ಧಾರದಿಂದ ಭಾರತದ ಆರ್ಥಿಕತೆಗೆ ಸಮಸ್ಯೆ ಉಂಟಾಯಿತು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಸಾಲ ಮೊರಟೋರಿಯಂ (ಸಾಲ ಮರು ಪಾವತಿಗೆ ವಿನಾಯಿತಿ) ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ಹಾಗೂ ಎಂ.ಆರ್. ಶಾ ಅವರನ್ನು ಒಳಗೊಂಡ ಪೀಠ, ಮೊರಟೋರಿಯಂ ಅವಧಿಯಲ್ಲಿ ಬ್ಯಾಂಕ್‌ಗಳು ಹೆಚ್ಚುವರಿ ಬಡ್ಡಿ ವಿಧಿಸುವ ನಿಲುವಿನ ಬಗ್ಗೆ ಕೇಂದ್ರ ಸರಕಾರವನ್ನು ಕೇಳಿತು ಹಾಗೂ ಈ ವಿಷಯದ ಕುರಿತು ಇದುವರೆಗೆ ಅಪಿಡವಿಟ್ ಸಲ್ಲಿಸಿಲ್ಲ ಯಾಕೆ ಎಂದು ಪ್ರಶ್ನಿಸಿತು.
‘‘ನೀವು ನಿಮ್ಮ ನಿಲುವು ಸ್ಪಷ್ಟಪಡಿಸಿ. ಆರ್‌ಬಿಐ ನಿರ್ಧಾರ ತೆಗೆದುಕೊಂಡಿದೆ ಎಂದು ನೀವು ಹೇಳುತ್ತೀರಿ, ನಾವು ಆರ್‌ಬಿಐ ಪ್ರತಿಕ್ರಿಯೆಯನ್ನು ಪರಿಶೀಲಿಸಿದ್ದೇವೆ. ಆದರೆ, ಕೇಂದ್ರ ಸರಕಾರ ಆರ್‌ಬಿಐ ಹಿಂದೆ ಅಡಗಿ ಕುಳಿತಿದೆ’’ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಸಾಲ ಮೊರಟೋರಿಯಂ ಪ್ರಕರಣದಲ್ಲಿ ಯಾವಾಗ ಅಫಿಡವಿಟ್ ಸಲ್ಲಿಸುತ್ತೀರಿ ಎಂದು ಸಮಯದ ಗಡು ನೀಡಿ ಎಂದು ಸುಪ್ರೀಂ ಕೋರ್ಟ್ ಪೀಠ ಕೇಂದ್ರ ಸರಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು. ಅನಂತರ ಮೆಹ್ತಾ ಅಫಿಡವಿಟ್ ಸಲ್ಲಿಸುವ ಅವಧಿಯನ್ನು ಒಂದು ವಾರಗಳ ಕಾಲ ವಿಸ್ತರಿಸುವಂತೆ ಮನವಿ ಮಾಡಿದರು. ಪ್ರಸಕ್ತ ಆರ್ಥಿಕ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ.ಆರ್. ಶಾ, ಕೇಂದ್ರ ಸರಕಾರ ‘ವ್ಯವಹಾರದ’ ಬಗ್ಗೆ ಚಿಂತಿಸುವ ಸಮಯ ಇದಲ್ಲ ಎಂದು ಮೆಹ್ತಾ ಅವರಿಗೆ ತಿಳಿಸಿದರು.
ಮೊರಟೋರಿಯಂ ಅವಧಿಯಲ್ಲಿ ಸಾಲ ಮರು ಪಾವತಿ ಮೇಲೆ ಬಡ್ಡಿ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೀಠ ನಡೆಸಿತು.
ಪ್ರಕರಣದಲ್ಲಿ ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ‘‘ಮೊರಟೋರಿಯಂ ಅವಧಿ ಆಗಸ್ಟ್ 31ಕ್ಕೆ ಕೊನೆಯಾಗುತ್ತದೆ. ಸೆಪ್ಟಂಬರ್ 1ರಿಂದ ನಾವು ಸುಸ್ತಿದಾರರಾಗುತ್ತೇವೆ. ಅನಂತರ ಈ ಸಾಲಗಳು ಪಾವತಿಯಾಗದ ಸಾಲವಾಗುತ್ತವೆ. ಇದು ಅತಿ ದೊಡ್ಡ ಸಮಸ್ಯೆ ಸೃಷ್ಟಿಸಬಹುದು’’ ಎಂದರು.
‘‘ಈ ಸಮಸ್ಯೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ಮೊರಟೋರಿಯಂ ಅವಧಿಯನ್ನು ಮುಂದುವರಿಸಬೇಕು.. ಆರ್ಥಿಕತೆ ಚೇತರಿಕೆಯಾಗದೇ ಇರುವುದರಿಂದ ಈ ತ್ರೈಮಾಸಕ್ಕಿಂತ ಮುಂದಿನ ತೈಮಾಸ ಕಷ್ಟಕರವಾಗಿರಲಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ’’ ಎಂದು ಸಿಬಲ್ ತಿಳಿಸಿದರು. ಆದರೆ, ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಬಲ್ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
‘‘ಆರ್‌ಬಿಐ ಹಿಂದೆ ಅಡಗಿ ಕುಳಿತುಕೊಳ್ಳಬೇಡಿ’’
ಆರ್‌ಬಿಐ ಹಿಂದೆ ಅಡಗಿ ಕುಳಿತುಕೊಳ್ಳಬೇಡಿ. ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ತಿಳಿಸಿದೆ.
‘‘ನೀವು ನಿಮ್ಮ ನಿಲುವು ಸ್ಪಷ್ಟಪಡಿಸಿ. ನೀವು ಏನನ್ನೂ ಹೇಳದಿರಲು ಸಾಧ್ಯವಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ನಿಮ್ಮ ಜವಾಬ್ದಾರಿ. ಬಡ್ಡಿ ಮನ್ನಾ ಮಾಡುವ ವಿಷಯದ ಕುರಿತ ನಿರ್ಧರಿಸಲು ನಿಮಗೆ ಸಾಕಷ್ಟು ಅಧಿಕಾರ ಇದೆ. ನೀವು ಕೇವಲ ಆರ್‌ಬಿಐಯನ್ನು ಅವಲಂಬಿಸಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್‌ನ ಪೀಠ ಹೇಳಿದೆ. ಇದು ವ್ಯವಹಾರದ ಹಿತಾಸಕ್ತಿಯ ಬಗ್ಗೆ ಮಾತ್ರ ಕಾಳಜಿ ವಹಿಸುವ ಸಮಯ ಅಲ್ಲ. ಬದಲಾಗಿ ನೀವು ಜನರ ಸಂಕಷ್ಟವನ್ನು ಕೂಡ ಪರಿಗಣಿಸಬೇಕು. ಆದರೆ, ಇದು ಯಾವುದನ್ನೂ ಪರಿಗಣಿಸದ ನಿಲುವು ಆರ್‌ಬಿಐಯದ್ದು. ನೀವು ಇದುವರೆಗೆ ಯಾವುದೇ ನಿಲುವು ತೆಗೆದುಕೊಂಡಿಲ್ಲ ಎಂದು ಪೀಠ ಕೇಂದ್ರ ಸರಕಾರಕ್ಕೆ ತಿಳಿಸಿದೆ.







