ಮೈಸೂರು ಮನಪಾ ಹಾಗೂ ಬಿಡಿಎ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ
ಅಪಾರ ಪ್ರಮಾಣದ ಚಿನ್ನ, ನಗದು ವಶ

ಬೆಂಗಳೂರು, ಆ.26: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಖಚಿತ ಮಾಹಿತಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಇಬ್ಬರು ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಲಕ್ಷಾಂತರ ರೂ. ನಗದು ಮತ್ತು ಮೂರು ಕೆಜಿಯಷ್ಟು ಚಿನ್ನಾಭರಣ ವಶಪಡಿಸಿಕೊಂಡು, ದಾಖಲೆ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ.
ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ, ಬೆಂಗಳೂರು ಈ ಹುದ್ದೆಗೆ ವರ್ಗಾವಣೆಗೊಂಡಿರುವ ಎಂ.ಎಸ್.ನಿರಂಜನ್ ಬಾಬು ಮತ್ತು ಮೈಸೂರು ಮಹಾನಗರ ಪಾಲಿಕೆಯ ವಲಯ-6ರ ಅಭಿವೃದ್ದಿ ಅಧಿಕಾರಿ ಎಚ್.ನಾಗರಾಜು ಅವರು ಹೊಂದಿರುವ ಮನೆಗಳು, ವಾಣಿಜ್ಯ ಸಂಕೀರ್ಣಗಳ ಮೇಲೆ ಬುಧವಾರ ದಾಳಿ ಮಾಡಲಾಗಿದೆ.
ದಾಳಿಯ ವೇಳೆ ಎಂ.ಎಸ್.ನಿರಂಜನ್ ಸೇರಿದ ತುಮಕೂರಿನ ಮಾರುತಿ ನಗರದಲ್ಲಿರುವ ವಾಸದ ಮನೆ, ತುಮಕೂರು ಜಿಲ್ಲೆಯ ವಿವಿಧೆಡೆಗಳಲ್ಲಿರುವ ಐದು ಮನೆ, ಎಂಟು ನಿವೇಶನಗಳು, ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯಲ್ಲಿ ಒಂದು ನಿವೇಶನ, ಒಂದು ಕೆಜಿ ಚಿನ್ನ, ಮೂರೂವರೆ ಕೆಜಿ ಬೆಳ್ಳಿ, ಎರಡು ಕಾರು, ಒಂದು ದ್ವಿಚಕ್ರ ವಾಹನ ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿ/ಠೇವಣಿಯಾಗಿ 20 ಲಕ್ಷ ರೂ. ಮತ್ತು ಸುಮಾರು 54 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.
ಅದೇರೀತಿ ನಾಗರಾಜು ಅವರಿಗೆ ಸೇರಿರುವ ಮೈಸೂರು ನಗರದಲ್ಲಿ ಎರಡು ವಾಸದ ಮನೆ, ಐದು ಅಂತಸ್ತಿನ ಒಂದು ವಾಣಿಜ್ಯ ಸಂಕೀರ್ಣ, ನಾಲ್ಕು ನಿವೇಶನ, ಬೆಂಗಳೂರು ನಗರದ ಬಿನ್ನಿಪೇಟೆಯಲ್ಲಿ ಒಂದು ಫ್ಲಾಟ್, ನಗರದಲ್ಲಿ ಒಂದು ನಿವೇಶನ, ಎರಡು ಕೆ.ಜಿ. ಚಿನ್ನ, ಹನ್ನೊಂದುವರೆ ಕೆಜಿ ಬೆಳ್ಳಿ, ಎರಡು ಕಾರುಗಳು, ನಾಲ್ಕು ದ್ವಿಚಕ್ರ ವಾಹನಗಳು, 9 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಎಸಿಬಿ ತಿಳಿಸಿದೆ.
ಎಂಎಸ್‍ಎನ್ ಬಾಬು ಬೆಂಗಳೂರು ಹುದ್ದೆಗೆ ವರ್ಗಾವಣೆ ಆದೇಶದಲ್ಲಿರುವವರು, ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು. ಎಸಿಬಿ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಆರೋಪಿತ ಸರಕಾರಿ ನೌಕರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.






.jpeg)

.jpeg)


.jpeg)

.jpeg)


_0.jpeg)




