ಪ್ರವಾಹ ಪೀಡಿತರಿಗೆ ಗರಿಷ್ಠ ಪರಿಹಾರ ನೀಡಲು ಮನಮೋಹನ್ ಸಿಂಗ್ ನೀತಿ ಅಡ್ಡಿ : ಸಚಿವ ಆರ್. ಅಶೋಕ್

ವಿಜಯಪುರ, ಆ.26 : ಎನ್‌ಡಿಆರ್‌ಎಫ್ ನಿಧಿಯಡಿ ಪ್ರವಾಹ ಪೀಡಿತರಿಗೆ ಗರಿಷ್ಠ ಪರಿಹಾರ ನೀಡಲು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಚಿಸಿರುವ ನಿಯಮಗಳು ಕೇಂದ್ರ ಸರಕಾರಕ್ಕೆ ಅಡ್ಡಿಯಾಗಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ದೂರಿದ್ದಾರೆ.
"ಈ ಹಿಂದಿನ ಮನಮೋಹನ್ ಸಿಂಗ್ ಸರಕಾರ ರೂಪಿಸಿರುವ ನಿಯಮಗಳಿಂದಾಗಿ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ರಾಜ್ಯಗಳಿಗೆ ಹೆಚ್ಚಿನ ಪರಿಹಾರ ವಿತರಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹಕ್ಕೆ ರಾಜ್ಯ ಸರಕಾರ ಕೋರಿದ 35 ಸಾವಿರ ಕೋಟಿ ರೂ. ಪರಿಹಾರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇನ್ನೂ ಬಿಡುಗಡೆಗೊಳಿಸಿಲ್ಲವೇಕೆ ಎಂದು ಕೇಳಿದ ಪ್ರಶ್ನೆಗೆ ಅಶೋಕ್ ಉತ್ತರಿಸಿದರು.
"ಮನಮೋಹನ್ ಸಿಂಗ್ ಸರಕಾರ ರೂಪಿಸಿದ ನೀತಿಯಿಂದಾಗಿ ಎನ್‌ಡಿಆರ್‌ಎಫ್ ಅಡಿ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಗತ್ಯದ ನಿಧಿ ಬಿಡುಗಡೆಗೊಳಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರವು ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತಾಳದೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ಅಡಿ ಪರಿಹಾರ ಯೋಜನೆಗೆ ಗರಿಷ್ಠ ಮೊತ್ತವನ್ನು ನೀಡಿದೆ. ಕರ್ನಾಟಕದಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಲು ಅಂತರ್ ಸಚಿವಾಲಯ ತಂಡವನ್ನು ಕಳುಹಿಸಿಕೊಡುವಂತೆ ಕೇಂದ್ರ ಸರಕಾರವನ್ನು ಕೋರಿದ್ದೇವೆ. ದಿಲ್ಲಿಯಿಂದ ತಂಡವು ನೆರೆ ಪರಿಶೀಲನೆ ನಡೆಸಲು ಬರುವ ನಿರೀಕ್ಷೆ ಇದೆ''ಎಂದು ಅಶೋಕ್ ಹೇಳಿದರು.
"ಈ ಬಾರಿಯ ಪ್ರವಾಹದಿಂದಾಗಿ 4,000 ಕೋ.ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪರಿಹಾರ ಕಾರ್ಯವನ್ನು ಕೈಗೊಳ್ಳಲು ಅಗತ್ಯವಿರುವ ಹಣಕಾಸು ನೆರವಿನ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದೇವೆ'' ಎಂದು ಅಶೋಕ್ ಹೇಳಿದರು.







