6ನೆ ತರಗತಿಯ ಸಮಾಜಶಾಸ್ತ್ರ ಪಠ್ಯದಲ್ಲಿನ ಪಾಠ ಕೈಬಿಡಲು ಶಿಕ್ಷಣ ಸಚಿವರ ಆದೇಶ

ಉಡುಪಿ, ಆ.26: ಆರನೇ ತರಗತಿಯ ಸಮಾಜಶಾಸ್ತ್ರ ಪಠ್ಯದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿರುವ ಅಂಶಗಳಿವೆ ಎಂಬ ಆಕ್ಷೇಪದ ಹಿನ್ನೆಲೆ ಯಲ್ಲಿ ಆ ಪಾಠವನ್ನು ಕೈ ಬಿಡಲು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ನೀಡಿದ್ದಾರೆ.
‘ಉತ್ತರ ವೇದಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆ ಕುಂಠಿತವಾಯಿತು. ಯಾಗಗಳಿಗೆ ಆಹಾರ ಧಾನ್ಯ- ಹಾಲು-ತುಪ್ಪಗಳನ್ನು ಹಾಕಿದ ಪರಿಣಾಮ ಆಹಾರದ ಅಭಾವವೂ ಉಂಟಾಯಿತು. ಯಾಗ ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು ಜನಸಾಮಾನ್ಯರಿಗೆ ಇದು ಅರ್ಥವಾಗುತ್ತಿರಲಿಲ್ಲ. ಸರಳ ಮಾರ್ಗ ಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು’ ಎಂದು ಈ ಪಠ್ಯದಲ್ಲಿ ಬರೆಯಲಾಗಿದೆ.
ಪಠ್ಯದಲ್ಲಿರುವ ಯಾಗದ ಕುರಿತ ವಿಚಾರ ತಪ್ಪು ಎಂಬ ಅಭಿಪ್ರಾಯದಲ್ಲಿ ಉಡುಪಿಯ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಡಿಯೋ ಬಿಡುಗಡೆ ಮಾಡಿದ್ದರು. ಈ ಕುರಿತು ಸಾಮಾಜಿಕ ಜಾಲ ತಾಣಗಲ್ಲಿ ವ್ಯಾಪಕ ಚರ್ಚೆಯೂ ನಡೆದಿತ್ತು.
ಇದಕ್ಕೆ ಪ್ರತಿಕ್ರಿಯಿಸಿ ಆಡಿಯೋ ಬಿಡುಗಡೆ ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಪಾಠ ಪುಸ್ತಕ ಈ ವರ್ಷ ಪ್ರಕಟವಾಗಿದ್ದಲ್ಲ. ಈ ವರ್ಷ ಯಾವುದೇ ಪಠ್ಯವನ್ನು ನಾವು ಪರಿಷ್ಕರಿಸಿಲ್ಲ. ಆದರೂ ಈ ವರ್ಷ ಈ ಪಾಠವನ್ನು ಮಾಡದಿರುವಂತೆ ಆದೇಶ ನೀಡುತ್ತೇನೆ. ಮುಂದಿನ ವರ್ಷ ಪಠ್ಯ ಪುಸ್ತಕ ಪ್ರಕಟ ವಾಗುವಾಗ ಈ ಪಾಠ ತೆಗೆಯಲಾಗುವುದು. ಈಗಾಗಲೇ ಎಲ್ಲ ಪಠ್ಯ ಪುಸ್ತಕ ಗಳು ಮುದ್ರಣ ಮಾಡಿ ಮಕ್ಕಳಿಗೆ ತಲುಪಿಸಿರುವುದರಿಂದ ಆ ಅಂಶವನ್ನು ಪಠ್ಯದಿಂದ ತೆಗೆಯಲು ಆಗಲ್ಲ ಎಂದು ಹೇಳಲು ವಿಷಾಧಿಸುತ್ತೇನೆ ಎಂದು ತಿಳಿಸಿದ್ದಾರೆ.







