ಆರ್ಥಿಕ ಪ್ರಗತಿಗಾಗಿ ವಿದೇಶಿ ಕಂಪೆನಿಗಳ ಬಂಡವಾಳ ಹೂಡಿಕೆಗೆ ಉತ್ತೇಜನ: ಮುಖ್ಯಮಂತ್ರಿ ಯಡಿಯೂರಪ್ಪ
![ಆರ್ಥಿಕ ಪ್ರಗತಿಗಾಗಿ ವಿದೇಶಿ ಕಂಪೆನಿಗಳ ಬಂಡವಾಳ ಹೂಡಿಕೆಗೆ ಉತ್ತೇಜನ: ಮುಖ್ಯಮಂತ್ರಿ ಯಡಿಯೂರಪ್ಪ ಆರ್ಥಿಕ ಪ್ರಗತಿಗಾಗಿ ವಿದೇಶಿ ಕಂಪೆನಿಗಳ ಬಂಡವಾಳ ಹೂಡಿಕೆಗೆ ಉತ್ತೇಜನ: ಮುಖ್ಯಮಂತ್ರಿ ಯಡಿಯೂರಪ್ಪ](https://www.varthabharati.in/sites/default/files/images/articles/2020/08/26/256528-1598457060.jpg)
ಬೆಂಗಳೂರು, ಆ.26: ರಾಜ್ಯವು ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಲು ನಮ್ಮ ಸರಕಾರವು ಎಲ್ಲ ಕ್ಷೇತ್ರಗಳಲ್ಲಿ ವಿದೇಶಿ ಕಂಪೆನಿಗಳ ನೇರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಿದ್ದ ಇಂಡೋ-ಜಪಾನಿಸ್ ಬಿಸಿನೆಸ್ ಫೋರಂನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಪಾನ್ ಕಂಪೆನಿಗಳಿಂದ ನೇರ ಹೂಡಿಕೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು. ಬಂಡವಾಳ ಹೂಡಿಕೆಗೆ ಕರ್ನಾಟಕವು ಅತ್ಯಂತ ಸೂಕ್ತ ತಾಣ ಹಾಗೂ ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಜಪಾನ್ ದೇಶದ ನಿಯೋಗಕ್ಕೆ ಮುಖ್ಯಮಂತ್ರಿ ಮನವಿ ಮಾಡಿದರು.
ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್ಗೆ ಸಂಬಂಧಿಸಿದಂತೆ ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್ಶಿಪ್ ಸ್ಥಾಪಿಸಲಾಗಿದೆ. ಇದಲ್ಲದೇ ಜಪಾನ್ ದೇಶದ ಕಂಪೆನಿಗಳ ಸಹಯೋಗದೊಂದಿಗೆ ನಮ್ಮ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಪಾನ್ ಕೈಗಾರಿಕಾ ಟೌನ್ಶಿಪ್ಗೆ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ರಸ್ತೆ, ವಿದ್ಯುತ್ ಮತ್ತು ನೀರು ಸರಬರಾಜಿನಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಟೌನ್ಶಿಪ್ನಲ್ಲಿ ಹೆವಿ ಇಂಜಿನಿಯರಿಂಗ್, ಯಂತ್ರೋಪಕರಣ, ಆಟೋಮೋಟಿವ್ ಮತ್ತು ಏರೋಸ್ಪೇಸ್ ಘಟಕಗಳಿಗೆ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಐಟಿ, ಐಟಿಇಎಸ್, ಯಂತ್ರೋಪಕರಣಗಳು, ವಾಹನಗಳು, ಏರೋಸ್ಪೇಸ್ ಸೇರಿದಂತೆ ರಾಜ್ಯದಲ್ಲಿ ಲಭ್ಯವಿರುವ ಪ್ರಾಥಮಿಕ ಮತ್ತು ತೃತೀಯ ವಲಯದ ಉದ್ದಿಮೆ ಅವಕಾಶಗಳ ಬಗ್ಗೆಯೂ ಮುಖ್ಯಮಂತ್ರಿ ವಿವರಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿರುವ ಹೂಡಿಕೆದಾರರು ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಇತ್ತೀಚೆಗೆ ವಿದೇಶಿ ಉದ್ಯಮಿಗಳೂ ರಾಜ್ಯದ ಬಗ್ಗೆ ಒಲವು ತೋರಿಸುತ್ತಿದ್ದಾರೆ. 2020ರ ಮಾರ್ಚ್ ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ನಾವು ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಹೆಚ್ಚಿನ ಸಂಖ್ಯೆಯ ನವೋದ್ಯಮ(ಸ್ಟಾರ್ಟ್ ಅಪ್)ಗಳಿಗೆ ರಾಜ್ಯ ನೆಲೆಯಾಗಿದ್ದು, ಉದಯೋನ್ಮುಖ ಉದ್ಯಮಿಗಳಿಗೆ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಕರ್ನಾಟಕವು, ಉದ್ಯಮ ಸ್ನೇಹಿ ಆಡಳಿತದ ಜತೆಗೆ ಕೈಗಾರಿಕೆಗಳಿಗೆ ಪೂರಕವಾದ ನೀತಿ ರೂಪಿಸುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಿಸಿದೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯವು ಕೈಗಾರಿಕೆಯಲ್ಲಿ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ಸುಮಾರು 250 ಶತಕೋಟಿ ಡಾಲರ್ ಆರ್ಥಿಕತೆಯ ರಾಜ್ಯ, ಶೇ.9.6ರಷ್ಟು ದರದಲ್ಲಿ ಪ್ರಗತಿ ಕಾಣುತ್ತಿದೆ. ಯಂತ್ರೋಪಕರಣಗಳು, ಬೃಹತ್ ಯಂತ್ರೋಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಜೈವಿಕ ತಂತ್ರಜ್ಞಾನದಂತಹ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ರಾಜ್ಯ ಬಹಳ ಹಿಂದಿನಿಂದಲೂ ಪ್ರಾಬಲ್ಯ ಹೊಂದಿದೆ ಎಂದು ಅವರು ಹೇಳಿದರು.
ವಿಶ್ವದ 500 ಫಾರ್ಚೂನ್ ಕಂಪೆನಿಗಳ ಪೈಕಿ 400 ಕಂಪೆನಿಗಳು, ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ಬೆಂಗಳೂರು ನೆಲೆಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ಶಾಲೆಗಳು, ಮನರಂಜನೆ, ಮೆಟ್ರೋ ರೈಲು, ಅಂತರ್ರಾಷ್ಟ್ರೀಯ ವಿಮಾನಯಾನ ಮತ್ತು ಸಾಮಾಜಿಕ ಕೂಟಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಆರ್ಥಿಕ ಪುನಶ್ಚೇತನಕ್ಕಾಗಿ ರಾಜ್ಯ ಸರಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯ ಸರಕಾರವು ಹೂಡಿಕೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಹೊಸ ಕೈಗಾರಿಕಾ ನೀತಿ 2020-2025 ಪರಿಚಯಿಸಿದ್ದು, ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ. ಕೈಗಾರಿಕಾ ಸೌಲಭ್ಯ ಕಾಯ್ದೆ (2002)ಕ್ಕೆ ತಿದ್ದುಪಡಿ ತರಲಾಗಿದೆ. ಇದರಿಂದ, ಕೈಗಾರಿಕಾ ಸ್ಥಾಪನೆಗಾಗಿ ಕೈಗಾರಿಕೋದ್ಯಮಿಗಳು ಅನಗತ್ಯವಾಗಿ ಅಲೆದಾಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಏರೋಸ್ಪೇಸ್, ಎಲೆಕ್ಟ್ರಿಕ್ ವೆಹಿಕಲ್ಸ್, ಎಲೆಕ್ಟ್ರಾನಿಕ್ಸ್, ಜವಳಿ, ಕೃಷಿ, ಐಟಿ ಮತ್ತು ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳನ್ನು ಉತ್ತೇಜಿಸಲು ನಿರ್ದಿಷ್ಟ ನೀತಿ ರೂಪಿಸಲಾಗಿದೆ. ಹೂಡಿಕೆಗೆ ಸೂಕ್ತ ತಾಣವಾಗಿರುವ ಕರ್ನಾಟಕಕ್ಕೆ ಜಪಾನಿನ ಕಂಪೆನಿಗಳನ್ನು ಆಹ್ವಾನಿಸುತ್ತೇವೆ. ಕರ್ನಾಟಕ ಮತ್ತು ಜಪಾನ್ ಪರಸ್ಪರ ಲಾಭದಾಯಕ ಆರ್ಥಿಕ ಸಹಭಾಗಿತ್ವವನ್ನು ಹೊಂದುವ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.