ಪುಲ್ವಾಮಾ ಆತ್ಮಹತ್ಯಾ ದಾಳಿ ಪ್ರಕರಣ: ಖಚಿತ ಪುರಾವೆ ಸಂಗ್ರಹಿಸಲು ಎನ್‌ಐಎ ಹರಸಾಹಸ

ಹೊಸದಿಲ್ಲಿ, ಆ.26: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ವರ್ಷ, 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ಸಮಿತಿ(ಎನ್‌ಐಎ)ಗೆ ಖಚಿತ ಪುರಾವೆ ಸಂಗ್ರಹಿಸುವುದು ಬಹುದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಂಬ್ ಸ್ಫೋಟದಲ್ಲಿ ಬಹುತೇಕ ಪುರಾವೆಗಳು ನಾಶವಾಗಿರುವುದರಿಂದ ಈಗ ವಿಧಿವಿಜ್ಞಾನ ಪ್ರಯೋಗ ಹಾಗೂ ಡಿಎನ್‌ಎ ಪರೀಕ್ಷೆಯ ಮೂಲಕ ಪುರಾವೆ ಸಂಗ್ರಹಿಸುವ ಕಾರ್ಯ ನಡೆದಿದೆ. ‘ಇದೊಂದು ಕುರುಡು ಪ್ರಕರಣದಂತಿದೆ. ಬಾಂಬ್ ದಾಳಿಯ ಬಗ್ಗೆ ಹಲವು ವದಂತಿಗಳು, ಹೇಳಿಕೆಗಳಿವೆ. ಆದರೆ ನ್ಯಾಯಾಲಯದಲ್ಲಿ ಎಲ್ಲವನ್ನೂ ಪುರಾವೆ ಸಹಿತ ಮುಂದಿಡಬೇಕಿದೆ. ಈ ಕಾರ್ಯದಲ್ಲಿರುವ ಮೊದಲ ಸವಾಲೆಂದರೆ, ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ಶಾ ಬಳಸಿದ ಕಾರಿನ ಮಾಲಕತ್ವವನ್ನು ಸಾಬೀತುಪಡಿಸುವುದು’ ಎಂದು ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರಿನ ನೋಂದಣಿ ಸಂಖ್ಯೆಯೂ ನಾಶವಾಗಿದ್ದರೂ ವಿಸ್ತೃತ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗದ ಸಹಾಯದಿಂದ ಕಾರಿನ ಮಾಲಕತ್ವವನ್ನು ಗುರುತಿಸಲಾಗಿದೆ(200 ಕಿ.ಗ್ರಾಂನಷ್ಟು ಸ್ಫೋಟಕವಿದ್ದ ಕಾರು ಬಾಂಬ್ ದಾಳಿಯಲ್ಲಿ ಚೂರು ಚೂರಾಗಿದೆ). ಕಾರಿನ ಅಂತಿಮ ಮಾಲಕತ್ವ ಸಜ್ಜಾದ್ ಭಟ್ಟ್ ಹೆಸರಲ್ಲಿತ್ತು ಮತ್ತು ಈತ ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ನಾಪತ್ತೆಯಾಗಿದ್ದು ಬಳಿಕ ಜೈಷೆ ಮುಹಮ್ಮದ್ ಸಂಘಟನೆಗೆ ಸೇರ್ಪಡೆಗೊಂಡಿದ್ದ.
ಕಳೆದ ವರ್ಷದ ಜೂನ್‌ನಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಈತನನ್ನು ಹತ್ಯೆ ಮಾಡಲಾಗಿದೆ. ಆತ್ಮಹತ್ಯಾ ಬಾಂಬರ್‌ನನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದರೂ ಇದನ್ನು ಪುರಾವೆ ಸಹಿತ ನಿರೂಪಿಸಲು ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ದೊರೆತ ಮಾನವ ದೇಹದ ಅವಶೇಷಗಳನ್ನು ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿತ್ತು. ಡಿಎನ್‌ಎ ಪರೀಕ್ಷೆಯ ವರದಿಯಲ್ಲಿ, ಬಾಂಬ್ ಸ್ಫೋಟದ ಸ್ಥಳದಲ್ಲಿ ದೊರೆತ ಡಿಎನ್‌ಎ, ಆದಿಲ್ ಅಹ್ಮದ್‌ನ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







