ಬೈಕ್- ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಅಗತ್ಯವಿಲ್ಲ: ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರು, ಆ.26: ಬೈಕ್‍ನಲ್ಲಿ ಚಲಿಸುವಾಗ ಹಾಗೂ ಒಬ್ಬರೇ ಕಾರು ಚಲಾಯಿಸುವ ಸಂದರ್ಭದಲ್ಲಿ ಮಾಸ್ಕ್ ಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.
ಬಿಬಿಎಂಪಿ ಮಾರ್ಷಲ್‍ಗಳು ಮಾಸ್ಕ್ ಧರಿಸದ ಜನರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುತ್ತಿದ್ದಾರೆ ಎನ್ನುವ ಆರೋಪಗಳ ಬೆನ್ನಲ್ಲೆ, ಬಿಬಿಎಂಪಿ ಈ ರೀತಿಯ ಹೇಳಿಕೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವುದಾದರೆ ಯಾವುದೇ ಮುಖಗವಸಿನ ಅಗತ್ಯವಿಲ್ಲ. ಅದೇ ಒಬ್ಬರಿಗಿಂತ ಹೆಚ್ಚು ಜನರು ಇದ್ದರೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದ್ದಾರೆ. ಅಲ್ಲದೇ ಬೈಕ್‍ನಲ್ಲೂ ಕೂಡ ಒಬ್ಬರಿದ್ದರೆ ಮುಖಗವಸಿನ ಅಗತ್ಯವಿಲ್ಲ, ಇಬ್ಬರಿದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
ಒಬ್ಬರೆ ಜಾಗಿಂಗ್ ಮಾಡುವಾಗ, ಓಡುವಾಗ, ವಾಕಿಂಗ್ ಮಾಡುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇನ್ನು ಬಿಬಿಎಂಪಿ ಮಾರ್ಷಲ್‍ಗಳು ಕೊರೋನ ಆರಂಭವಾದ ಬಳಿಕ ಈವರೆಗೆ ಬೆಂಗಳೂರಿನ 83,673 ಮಂದಿಗೆ ದಂಡ ವಿಧಿಸಿದ್ದು, ಸುಮಾರು 1.6 ಕೋಟಿ ರೂ. ಸಂಗ್ರಹಿಸಿದ್ದಾರೆ. ಅಲ್ಲದೇ ಮಾಸ್ಕ್ ಸಂಬಂಧ ಸರಿಯಾದ ನಿಯಮಗಳು ಇಲ್ಲದೆ ಇರುವುದರಿಂದ ಮಾರ್ಷಲ್‍ಗಳು ಜನರ ವಿರುದ್ಧ ಮಾಸ್ಕ್ ವಿಚಾರವಾಗಿ ನಿರ್ದಾಕ್ಷಿಣ್ಯ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.







