ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.70, ಮರಣ ಪ್ರಮಾಣ ಶೇ.1.69: ಸಚಿವ ಡಾ.ಕೆ.ಸುಧಾಕರ್
ಕೊರೋನ ವೈರಸ್

ಬೆಂಗಳೂರು, ಆ.26: ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ಶೇ.1ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಚೇತರಿಕೆ ಪ್ರಮಾಣ ಶೇ.70ರಷ್ಟು ಇದ್ದು, ಮರಣ ಪ್ರಮಾಣ ಶೇ.1.69ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅನ್ ಲಾಕ್ ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಎಲ್ಲ ರಾಜ್ಯ ಸರಕಾರಗಳು ಪಾಲಿಸುತ್ತಿವೆ. ತಿಂಗಳಾಂತ್ಯದಲ್ಲಿ ಪ್ರಧಾನಿ ಸಭೆ ನಡೆಸಿ ಸೂಕ್ತ ಮಾರ್ಗಸೂಚಿ ನೀಡುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚುವ ಬಗ್ಗೆ ಆತಂಕಗೊಳ್ಳಬಾರದು. ರಾಜ್ಯದಲ್ಲಿ ಶೇ.70 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಮರಣ ಪ್ರಮಾಣ ಕಡಿಮೆಯಾಗಿದೆ. ಇದು ಸರಕಾರದ ಸಾಧನೆ. ಕೋವಿಡ್‍ಗೆ ಸಂಬಂಧಿಸಿದ ಯಾವುದೇ ಖರೀದಿ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಅಭಿನಂದನೆ
ಶಿವಾಜಿನಗರದ ಹಾಜಿ ಸರ್ ಇಸ್ಮಾಯಿಲ್ ಸೇಠ್(ಎಚ್‍ಎಸ್‍ಐಎಸ್) ಘೋಷ್ ಆಸ್ಪತ್ರೆಯಲ್ಲಿ 17 ದಿನಗಳಲ್ಲಿ, ಕೋವಿಡ್ ಸೋಂಕಿತ 50 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.







