ಕಾಳಜಿ ಸಮಿತಿಯಲ್ಲಿ ಸಂಗ್ರಹವಾದ ಮೊತ್ತವನ್ನು ಮನೆ ಕಳೆದುಕೊಂಡವರಿಗೆ ಹಂಚಲಾಗುವುದು : ಬಿ.ಕೆ ಧನಂಜಯ ರಾವ್
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಮಾನ ಮನಸ್ಕರು ಜಾತಿ, ಧರ್ಮ, ಪಕ್ಷಬೇಧ ಮರೆತು ಸೇರಿಕೊಂಡು ಪ್ರವಾಹ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ರಚಿಸಿರುವ ಕಾಳಜಿ ಸಮಿತಿಯಲ್ಲಿ 2 ಕೋಟಿ 59 ಲಕ್ಷ ರೂ ಸಂಗ್ರಹವಾಗಿದ್ದು ಅದನ್ನು ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ವರಿಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ಹಂಚಲಾಗುತ್ತದೆ ಎಂದು ಕಾಳಜಿ ರಿಲೀಫ್ ಫಂಡ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್ ಹೇಳಿದರು.
ಆ.26ರಂದು ಬೆಳ್ತಂಗಡಿ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಳಜಿ ರಿಲೀಫ್ ಫಂಡ್ ಸಮಿತಿಯವರು ಸಮಿತಿಯ ಉದ್ದೇಶ ಹಾಗೂ ಸಂಗ್ರಹವಾಗಿರುವ ಹಣದ ಕುರಿತು ವಿವರ ನೀಡಿದರು. “ಕಳೆದ ಬಾರಿ ನೆರೆ ಪ್ರವಾಹ ಬಂದಿರುವ ಸಂದರ್ಭದಲ್ಲಿ ಮನೆ ಕಳೆದು ಕೊಂಡವರಿಗೆ ಶಾಶ್ವತ ನೆಲೆ ಆಗಬೇಕು ಜನರ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸಬೇಕೆನ್ನುವ ನಿಟ್ಟಿನಲ್ಲಿ ನಾವು ಚರ್ಚಿಸಿದ ವಿಚಾರ ಶಾಸಕರ ಗಮನಕ್ಕೆ ಬಂದು ನಮ್ಮ ಉದ್ದೇಶ ಒಳ್ಳೆಯದಿದ್ದುದರಿಂದ ಅವರು ಕೂಡಾ ಸೇರುವುದಾಗಿ ಹೇಳಿದರು. ಈ ಕ್ಷೇತ್ರದ ಶಾಸಕರಾದುದರಿಂದ ಅವರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ನಾವೆಲ್ಲ ಸೇರಿ ಮಾಡಿರುತ್ತೇವೆ ಎಂದು ಹೇಳಿದರು.
ಸಮಿತಿಯ ಹೆಸರಿನಲ್ಲಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನೀಡಿ ನಮ್ಮ ಉದ್ದೇಶ ತಿಳಿಸಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಸಹಕಾರ ದೊರೆತಿದೆ. ಶಾಸಕರು ಅವರ ಸಂಪರ್ಕದಲ್ಲಿದ್ದವರಲ್ಲಿ, ನಾವು ಕೂಡಾ ನಮ್ಮ ಸಂಪರ್ಕದಲ್ಲಿದ್ದ ವರಲ್ಲಿ ಈ ವಿಷಯ ತಿಳಿಸಿದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಈಗಲೂ ಹಣ ಬರುತ್ತಿದೆ. ಅದೆಲ್ಲವೂ ನಮ್ಮ ಅಕೌಂಟ್‌ನಲ್ಲಿದೆ ಎಂದು ಹೇಳಿದರು.
ವಿಳಂಬ ಆಗಿದೆ :
ಸರಕಾರ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 289 ಮನೆಯ ಪ್ರವಾಹದಿಂದ ಹಾನಿಯಾಗಿರುವ ವರದಿಯಲ್ಲಿ ಗುರಿತಿಸಿತಲ್ಲದೆ, ಅದರಲ್ಲಿ 203 ಎ ಕೆಟಗೆರಿ, 56 ಬಿ ಹಾಗೂ 30 ಮನೆಗಳು ಸಿ ಕೆಟಗೆರಿ ಎಂದು ನಿರ್ಧರಿಸಲ್ಪಟ್ಟಿತು. ಪೂರ್ತಿ ಹಾನಿಯಾದ 203 ಮನೆಯವರಿಗೆ 5 ಲಕ್ಷದ ಪರಿಹಾರ ವಿತರಣೆಯ ಘೋಷಣೆ ಆಯಿತು. ಹೆಚ್ಚಿನವರಿಗೆ 1 ಲಕ್ಷ ಬಂದಿತ್ತಾದರೂ ಅದರಲ್ಲಿ ಕೇವಲ 18 ಮಂದಿ ಮಾತ್ರ ಕೆಲಸ ಆರಂಭಿಸಿದರು. ಯಾರು ಮನೆಕಟ್ಟಲು ಆರಂಭ ಮಾಡುತ್ತಾರೋ ಆರ್ಥಿಕ ಸಂಕಷ್ಟ ಎದುರಿಸುತ್ತಾರೋ ಅವರಿಗೆ ನಾವು ಸಂಗ್ರಹಿಸಿದ ಹಣ ಸಂದಾಯ ಆಗಬೇಕಿದ್ದರಿಂದ ಹಾಗೂ ಕೊರೊನಾ ಲಾಕ್‌ಡೌನ್ ನಿಂದಾಗಿ ಹಣ ಹಂಚಿಕೆಗೆ ಸ್ವಲ್ಪ ಡಿಲೇ ಆಯಿತು ಎಂದು ಅವರು ಸ್ಪಷ್ಟ ಪಡಿಸಿದರು.
2 ಕೋಟಿ 59 ಲಕ್ಷ; ಮಾಜಿ ಶಾಸಕ ವಸಂತ ಬಂಗೇರರು ರಿಲೀಫ್ ಫಂಡ್‌ನ ಹಣದ ಲೆಕ್ಕ ಕೇಳುತ್ತಿದ್ದಾರೆ ಇದನ್ನು ನಾವು ಸ್ವಾಗತಿಸುತ್ತೇವೆ. ದಾನಿಗಳಿಂದ ಒಟ್ಟು ಸೇರಿ ಸಂಗ್ರಹಿಸಿದ ಈ ಹಣದ ಲೆಕ್ಕವನ್ನು ಸಮಾಜಕ್ಕೆ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕಾಳಜಿ ಬೆಳ್ತಂಗಡಿ ಪ್ಲಡ್ ರಿಲಿಫ್ ಫಂಡ್ ಕೋಶಾಧಿಕಾರಿ ನಂದ ಕುಮಾರ್, ಸದಸ್ಯರಾದ ಮೋಹನ್ ಕುಮಾರ್, ರಾಜೇಶ್ ಪೈ, ಗಣೇಶ ಗೌಡ, ಲ್ಯಾನ್ಸಿ ಪಿಂಟೋ ಜಯಕರ ಶೆಟ್ಟಿ, ಪ್ರವೀಣ ಇಂದ್ರ, ಅಬುಬೊಕ್ಕರ್ ಉಜಿರೆ ಇದ್ದರು.







