ವಿವಿಐಪಿಗಳ ಪ್ರಯಾಣಕ್ಕೆ ಮೀಸಲಾದ ಬಿ777 ವಿಮಾನಗಳ ಹಸ್ತಾಂತರ ವಿಳಂಬ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ.26: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯವರ ಪ್ರಯಾಣಕ್ಕೆ ಬಳಸುವ, ಅಮೆರಿಕ ನಿರ್ಮಿತ ಬಿ377 ವಿಮಾನಗಳ ಆಗಮನ ವಿಳಂಬವಾಗಲಿದೆ ಎಂದು ಏರಿಂಡಿಯಾದ ಹಿರಿಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಆಗಸ್ಟ್ 15ರ ವೇಳೆಗೆ ಈ ವಿಮಾನ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಕೊರೋನ ಸೋಂಕಿನ ಸಮಸ್ಯೆಯಿಂದಾಗಿ ವಿಳಂಬವಾಗಿದ್ದು ಸೆಪ್ಟೆಂಬರ್ನಲ್ಲಿ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ.
ಬೋಯಿಂಗ್ ಸಂಸ್ಥೆ ನಿರ್ಮಿಸಿರುವ ಕಸ್ಟಮ್ ಮೇಡ್ (ಬಹುತೇಕ ಹಾರಾಟಕ್ಕೆ ಸಿದ್ಧವಾದ ) ವಿಮಾನಗಳನ್ನು ಬಹುಮುಖ್ಯ ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಮಾತ್ರ ಬಳಸಲಾಗುವುದು ಮತ್ತು ಇವನ್ನು ಏರಿಂಡಿಯಾ ಪೈಲಟ್ಗಳ ಬದಲು ಭಾರತೀಯ ವಾಯುಪಡೆಯ ಪೈಲಟ್ಗಳು ಚಲಾಯಿಸುತ್ತಾರೆ. ಈಗ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಏರಿಂಡಿಯಾದ ಬಿ747 ವಿಮಾನಗಳ ಮೂಲಕ ಪ್ರಯಾಣಿಸುತ್ತಿದ್ದು , ಈ ವಿಮಾನಗಳಿಗೆ ‘ಏರ್ಇಂಡಿಯಾ ವನ್’ ಎಂಬ ಸಂಕೇತ ಬಳಸಲಾಗುತ್ತದೆ.
ಇತರ ಸಂದರ್ಭದಲ್ಲಿ ಈ ವಿಮಾನಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಲಾಗುತ್ತಿತ್ತು. ಈಗ ಈ ಎರಡು ವಿಮಾನಗಳನ್ನು ಬೋಯಿಂಗ್ ಸಂಸ್ಥೆಗೆ ವಾಪಸು ಕಳುಹಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನವೀಕರಿಸಲಾಗಿದೆ. ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಿರುವ ಈ ವಿಮಾನಗಳನ್ನು 190 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಖರೀದಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.





