ಟಿಕೆಟ್ ಕಾದಿರಿಸಲು ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸೂಚನೆ

ಹೊಸದಿಲ್ಲಿ, ಆ.26: ಅಂತಾರಾಷ್ಟ್ರೀಯ ಪ್ರಯಾಣದ ವಿಮಾನಗಳಲ್ಲಿ ಟಿಕೆಟ್ ಮುಂಗಡ ಕಾದಿರಿಸಲು ಇಲಾಖೆಯನ್ನು ಸಂಪರ್ಕಿಸುವ ಅಗತ್ಯವಿಲ್ಲ. ವಿಮಾನಯಾನ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಯಾಣಿಕರಿಗೆ ಸೂಚಿಸಿದೆ.
ಗೃಹ ಇಲಾಖೆ ಆಗಸ್ಟ್ 22ರಂದು ಬಿಡುಗಡೆಗೊಳಿಸಿದ ಪ್ರಮಾಣಿತ ಕಾರ್ಯವಿಧಾನ ನಿಯಮಾವಳಿಯ ಪ್ರಕಾರ, ಅಂತರಾಷ್ಟ್ರೀಯ ಪ್ರಯಾಣದ ವಿಮಾನಗಳಲ್ಲಿ ಪ್ರಯಾಣಿಸಲು ಅರ್ಹರಾದ ವ್ಯಕ್ತಿಗಳು, ಟಿಕೆಟ್ ಕಾಯ್ದಿರಿಸಲು ನಾಗರಿಕ ವಿಮಾನಯಾನ ಸಚಿವಾಲಯ ಅಥವಾ ನಿಯೋಜಿತ ಸಂಸ್ಥೆಗಳನ್ನು ಅಗತ್ಯವಿರುವ ವಿವರ(ನಿರ್ಗಮನ ಮತ್ತು ಆಗಮನ ಸ್ಥಳದ ವಿವರ ಸಹಿತ)ಗಳೊಂದಿಗೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿತ್ತು.
ವಂದೇಭಾರತ್ ಯೋಜನೆಯಡಿ ಮತ್ತು ‘ಏರ್ ಟ್ರಾನ್ಸ್‌ಪೋರ್ಟ್ ಬಬಲ್’ (ಪರಸ್ಪರ ವಿಮಾನ ಸಂಚಾರದ ಬಗ್ಗೆ ಎರಡು ರಾಷ್ಟ್ರಗಳ ನಡುವಿನ ಒಪ್ಪಂದ)ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿ ಟಿಕೆಟ್ ಕಾಯ್ದಿರಿಸಬಹುದು. ಇದಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಬುಧವಾರ (ಆಗಸ್ಟ್ 26)ರಂದು ನಾಗರಿಕ ವಿಮಾನಯಾನ ಇಲಾಖೆಯ ಟ್ವಿಟರ್‌ನಲ್ಲಿ ತಿಳಿಸಲಾಗಿದೆ.





