ಭೇಟಿಗೆ ಅವಕಾಶ ನೀಡುತ್ತಿಲ್ಲ ಆರೋಪಿಸಿ ಬಿಡಿಎ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ
ಬೆಂಗಳೂರು, ಆ.26: ನಮ್ಮ ಕೆಲಸ ಮಾಡಿಕೊಡಲು ಬಿಡಿಎ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಮತ್ತು ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಕೆಲ ರೈತರು ಹಾಗೂ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ಬೆಳಗ್ಗಿನಿಂದ ಬಿಡಿಎ ಕಚೇರಿ ಮುಂದೆ ಕಾದುಕಾದು ಸುಸ್ತಾಗಿದ್ದ ರೈತರು ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿ ನಂತರ ಪ್ರತಿಭಟನೆ ಮಾಡಿದರು.
ಅಧಿಕಾರಿಗಳಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ನೂತನ ಬಿಡಿಎ ಆಯುಕ್ತರು ಸಾರ್ವಜನಿಕರ ಭೇಟಿಗೆ ನಾಲ್ಕು ಗಂಟೆ ನಂತರ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಕಳೆದ ಏಳು ದಿನದಿಂದ ಲಾಕ್‍ಡಾನ್ ಇದ್ದರಿಂದ ಯಾರನ್ನೂ ಒಳಗೆ ಬಿಟ್ಟಿರಲಿಲ್ಲ. ನಮ್ಮ ಅಹವಾಲನ್ನು ಸಲ್ಲಿಸಲು ಮತ್ತು ನಮಗೆ ಆಗುತ್ತಿರುವ ಅನ್ಯಾಯವನ್ನು ತಿಳಿಸಲು ಇಲ್ಲಿಗೆ ಬಂದರೆ ನಮ್ಮನ್ನು ಕಾಯಿಸಲಾಗುತ್ತಿದೆ. ಊಟ ನೀರು ಇಲ್ಲದೆ ನಾವು ಬಳಲುತ್ತಿದ್ದೇವೆ. ಬಿಡಿಎಯವರಿಗೆ ಕಣ್ಣಿಲ್ಲ, ಕಿವಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಬ್ರೋಕರ್‍ಗಳು ಮತ್ತು ತಮಗಿಷ್ಟ ಬಂದವರನ್ನು ಮಾತ್ರ ಒಳಗಡೆ ಕರೆಸಿಕೊಳ್ಳುತ್ತಿದ್ದಾರೆ. ಪೊಲೀಸರನ್ನು ಬಿಟ್ಟು ನಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





