ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಸಿಎಂಗೆ ಮನವಿ: ವಿನಯ್ ಗುರೂಜಿ
ಬೆಂಗಳೂರು, ಆ.26: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ಜ್ಯೋತಿಷಿ ವಿನಯ್ ಗುರೂಜಿ ಹೇಳಿದ್ದಾರೆ.
ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವೆಡೆ ಪ್ರಾಣಿಗಳ ಹತ್ಯೆ ನಡೆಯುತ್ತಿದೆ. ಇದಕ್ಕಾಗಿ ಈಗ ಗೋಹತ್ಯೆ ನಿಷೇಧ ಅನಿವಾರ್ಯ. ಈ ಸಂಬಂಧ ನಾನು ನೀಡಿದ ಸಲಹೆಗಳನ್ನು ಮುಖ್ಯಮಂತ್ರಿಗಳು ಈವರೆಗೆ ನಿರಾಕರಿಸಿಲ್ಲ. ಈ ಸಲಹೆಯನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ವಿನಯ್ ಗುರೂಜಿ ತಿಂದು ಉಳಿದ ಅನ್ನವನ್ನು ಪ್ರಸಾದ ರೂಪದಲ್ಲಿ ಹಂಚುತ್ತಾರೆ ಎಂಬ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ ಎಂದು ಹೇಳಿದರು.
ನಾನೇ ನಿಶ್ಚಯ ಮಾಡಿದ ಮದುವೆ ಅದು. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದೀನಿ, ಲೋಟ ಎಲ್ಲಿಟ್ಟಿದೀನಿ ಎಂದು ನೋಡುವುದಕ್ಕೆ ಆಗುವುದಿಲ್ಲ. ಅದು ನನ್ನ ಗಮನಕ್ಕೆ ಬರದೇ ನಡೆದಿರುವ ಪ್ರಸಂಗ. ಅದು ನನ್ನ ಗಮನಕ್ಕೆ ಬಂದಿದ್ದರೆ ಗಾಂಧಿವಾದದಂತೆ ನಾನು ಖಂಡಿಸುತ್ತಿದ್ದೆ. ಲಿಂಗಾಯತರಲ್ಲಿ ಒಂದು ಸಂಪ್ರದಾಯವಿದೆ. ನಾನು ಊಟ ಮಾಡಿದ ಮೇಲೆ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.







