2027ರ ಏಶ್ಯನ್ ಕಪ್ ಆತಿಥ್ಯಕ್ಕೆ ಖತರ್ ಬಿಡ್
ಕೌಲಾಲಂಪುರ, ಆ.26: 2027ರ ಆವೃತ್ತಿಯ ಏಶ್ಯನ್ ಕಪ್ ಟೂರ್ನಮೆಂಟ್‌ನ ಆತಿಥ್ಯದ ಹಕ್ಕಿಗಾಗಿ ಹಾಲಿ ಚಾಂಪಿಯನ್ ಖತರ್ ಬುಧವಾರ ಅಧಿಕೃತವಾಗಿ ಬಿಡ್ ಸಲ್ಲಿಸಿದ್ದು ಮೂರನೇ ಬಾರಿ ಟೂರ್ನಿಯ ಆತಿಥ್ಯವಹಿಸುವ ವಿಶ್ವಾಸದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೂರ್ನಮೆಂಟ್ ಆತಿಥ್ಯಕ್ಕೆ ಇತರ ನಾಲ್ಕು ದೇಶಗಳಾದ-ಭಾರತ, ಇರಾನ್, ಸೌದಿ ಅರೇಬಿಯ ಹಾಗೂ ಉಝ್ಬೇಕಿಸ್ತಾನ ಆಸಕ್ತಿ ತೋರಿವೆ ಎಂದು ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ)ತಿಳಿಸಿದೆ. 2021ರಲ್ಲಿ ಯಶಸ್ವಿ ಬಿಡ್‌ದಾರರನ್ನು ಘೋಷಿಸಲಾಗುತ್ತದೆ.
2022ರ ಫಿಫಾ ವಿಶ್ವಕಪ್ ಆತಿಥ್ಯವನ್ನು ವಹಿಸಲಿರುವ ಖತರ್ ಈ ಹಿಂದೆ 1988 ಹಾಗೂ 2011ರಲ್ಲಿ ಉಪ ಖಂಡದ ಉನ್ನತ ರಾಷ್ಟ್ರೀಯ ತಂಡದ ಪಂದ್ಯಾವಳಿ ಏಶ್ಯನ್ ಕಪ್‌ನ್ನು ಆಯೋಜಿಸಿತ್ತು ಎಂದು ಎಎಫ್‌ಸಿ ತಿಳಿಸಿದೆ. 16ರಿಂದ 24 ತಂಡಗಳಿಗೆ ವಿಸ್ತರಿಸಲಾಗಿದ್ದ 2019ರ ಏಶ್ಯನ್ ಕಪ್‌ನಲ್ಲಿ ಖತರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚೀನಾ 2023ರ ಏಶ್ಯನ್ ಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿದೆ.
Next Story





