ಬಿಬಿಎಂಪಿ ಆಡಳಿತಾಧಿಕಾರಿಯಾಗಿ ವಿಜಯ್ ಭಾಸ್ಕರ್ ನೇಮಕಕ್ಕೆ ಆಗ್ರಹ

ಬೆಂಗಳೂರು, ಆ, 26: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರನ್ನು ಹೆಚ್ಚುವರಿ ಪ್ರಭಾರದ ಮೇಲೆ ಬಿಬಿಎಂಪಿ ಆಡಳಿತಗಾರರನ್ನಾಗಿ ನೇಮಕ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ಹಕ್ಕು ಆಧ್ಯಯನ ಕೇಂದ್ರ ಪತ್ರ ಬರೆದು ಮನವಿ ಮಾಡಿದೆ.
ವಿಜಯ್ ಭಾಸ್ಕರ್ ಅವರು ಈ ಹಿಂದೆ ಬಿಬಿಎಂಪಿ ಪಾಲಿಕೆ ಆಡಳಿತಗಾರರಾಗಿದ್ದ ಸ್ವಲ್ಪ ಸಮಯದಲ್ಲೇ ಉತ್ತಮ ಆಡಳಿತ ನೀಡಿದ್ದರು. ಪಾಲಿಕೆ ಅಧಿಕಾರಿಗಳು ಮತ್ತು ನೌಕರರಲ್ಲಿ ಶಿಸ್ತು ತಂದಿದ್ದರು. ಆದ್ದರಿಂದ ಅವರನ್ನೇ ಆಡಳಿತಗಾರರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪಾಲಿಕೆಯಲ್ಲಿ ಕಂದಾಯ ಶುಲ್ಕ ಹೆಚ್ಚಳ ಮಾಡಿ ಸೋರಿಕೆಯನ್ನು ತಡೆಗಟ್ಟಿ ಪಾಲಿಕೆ ಆದಾಯ ಹೆಚ್ಚಳಕ್ಕೆ ಕಾರಣರಾಗಿದ್ದರು. ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಿ ಭ್ರಷ್ಟಾಚಾರವನ್ನು ತಡೆಗಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ಪಾಲಿಕೆಯ ವಿವಿಧ ಇಲಾಖೆಯಲ್ಲಿ ಸಮನ್ವಯ ತಂದು ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರಲು ಪ್ರಾಮಾಣಿಕ ಹಾಗೂ ಸಮರ್ಥರಾದ ವಿಜಯ್ ಭಾಸ್ಕರ್ ಅವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ.







