ಮಹಿಳಾ ಶೌಚಾಲಯವಾಗಿ ಮಾರ್ಪಟ್ಟ ಕೆಎಸ್ಆರ್‌ಟಿಸಿ ಬಸ್
ಡಿಸಿಎಂ ಲಕ್ಷ್ಮಣ ಸವದಿ ಚಾಲನೆ

ಬೆಂಗಳೂರು, ಆ.27: ಕೆಎಸ್ಆರ್‌ಟಿಸಿ ಅನುಷ್ಠಾನಗೊಳಿಸಿರುವ ನೂತನ ಮಹಿಳಾ ಶೌಚಾಲಯವನ್ನು ಡಿಸಿಎಂ ಲಕ್ಷ್ಮಣ ಸವದಿ ಗುರುವಾರ ಉದ್ಘಾಟಿಸಿದ್ದಾರೆ.
ಕೆಎಸ್ಆರ್‌ಟಿಸಿಯು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಕಾರದೊಂದಿಗೆ ಒಂದು ಅನುಪಯುಕ್ತ ಬಸ್ಸನ್ನು ಬಳಸಿ ಪ್ರಥಮ ಬಾರಿಗೆ ನಿರ್ಮಿಸಿರುವ ಮಹಿಳಾ ಶೌಚಾಲಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಶೌಚಾಲಯಕ್ಕೆ ಸ್ತ್ರೀ ಶೌಚಾಲಯ ಎಂದು ಹೆಸರಿಸಲಾಗಿದೆ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿಗಮದ ಪ್ರಥಮ ಆದ್ಯತೆಯಾಗಿದ್ದು, ಕೊರೋನ ಸಂದರ್ಭದಲ್ಲಿ ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯದ ಪ್ರಾರಂಭ ಮಾದರಿಯಾಗಲಿದೆ ಎಂದರು.
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಎಸ್ಆರ್‌ಟಿಸಿ ಕಾರ್ಯ ಶ್ಲಾಘನೀಯ. ಇದೇ ರೀತಿಯಲ್ಲಿ ಅನುಪಯುಕ್ತ ಬಸ್ಸುಗಳನ್ನು ವಿವಿಧ ಯೋಜನೆಗಳಿಗೆ ಉಪಯೋಗಿಸಲು ಡಿಸಿಎಂ ಸಲಹೆ ನೀಡಿದರು.
ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಿಮಾತ್ಯ ಶೌಚಾಲಯಗಳು, ವಾಷ್ ಬೇಸಿನ್‍ಗಳು, ಸೆನ್ಸಾರ್ ದೀಪಗಳನ್ನೊಳಗೊಂಡಿದ್ದು ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ.
ಈ ವೇಳೆ ಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ನಿರ್ದೇಶಕ ಡಾ.ರಾಮ್‍ನಿವಾಸ್ ಸಪೆಟ್, ಬಿಐಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್, ಕೆ ವೆಂಕಟೇಶ್ ಉಪಸ್ಥಿತರಿದ್ದರು.










