ಬಡ ಮಕ್ಕಳ ಹೆಸರಿನಲ್ಲಿ ಪೀಟರ್ ಮಚಾಡೋ ಕೋಟ್ಯಂತರ ರೂ. ಅವ್ಯವಹಾರ: ಕ್ಯಾಥೋಲಿಕ್ ಕ್ರೈಸ್ತರ ಸಂಘ ಆರೋಪ
ಬೆಂಗಳೂರು, ಆ.27: ಬಡ ಮಕ್ಕಳ ಏಳಿಗೆಯ ಹೆಸರಿನಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ಅವರು ಕೋಟ್ಯಂತರ ರೂ. ಅವ್ಯವಹಾರ ಮಾಡಿದ್ದಾರೆ ಎಂದು ಕ್ಯಾಥೋಲಿಕ್ ಕ್ರೈಸ್ತರ ಸಂಘ ಆರೋಪಿಸಿದೆ.
ಗುರುವಾರ ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತರ ಕನ್ನಡ ಸಂಘ ಹಾಗೂ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್.ಸಾಲ್ಡಾನಾ ಅವರು ವಿಡಿಯೋ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದಾರೆ.
ಬೆಂಗಳೂರು ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ಅವರು ಆಶಾ ಎಂಬ ಎನ್‍ಜಿಓ ಸಂಸ್ಥೆ ಮಾಡಿಕೊಂಡು ಬಡಮಕ್ಕಳ ಕಲ್ಯಾಣಕ್ಕಾಗಿ ಎಂದು ವಿದೇಶಗಳಿಂದ ಹಣ ತರಿಸುತ್ತಾರೆ. ಆದರೆ, ಆ ಹಣದಿಂದ ಯಾವುದೇ ಬಡಮಕ್ಕಳಿಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಬಡ ಮಕ್ಕಳ ಹೆಸರಿನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ. ಅವ್ಯವಹಾರದಲ್ಲಿ ಕಳೆದ 15 ವರ್ಷಗಳಿಂದ ಆಶಾ ಟ್ರಸ್ಟ್ ನಲ್ಲಿ ಕೆಲಸ ನಿರ್ವಹಿಸ್ತಿರುವ ಎಡ್ವರ್ಡ್ ಪಿಂಟೊ ಕೂಡಾ ಭಾಗಿಯಾಗಿದ್ದಾರೆ. ಆರ್ಚ್ ಬಿಷಪ್ ಅವ್ಯವಹಾರದ ಬಗ್ಗೆ ಲೆಕ್ಕ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮ ಧರ್ಮಗುರುಗಳ ವಿರುದ್ಧವೇ ನಮಗೆ ತುಂಬಾ ಬೇಸರವಾಗಿದೆ. ಬಡ ಮಕ್ಕಳಿಗೆ ಸಿಗಬೇಕಾದ ವಿದ್ಯಾರ್ಜನೆ ಸಿಗಬೇಕು. ಅವ್ಯವಹಾರದ ಬಗ್ಗೆ ಸರಕಾರ ಕೂಡಲೆ ತನಿಖೆ ನಡೆಸಬೇಕು ಎಂದು ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತ ಸಂಘದ ಅಧ್ಯಕ್ಷ ರಫೈಲ್ ರಾಜ್ ಆಗ್ರಹಿಸಿದ್ದಾರೆ.







