ಪ್ರೊ.ಕೆ.ರಾಮದಾಸ್ ಭಟ್ ನಿಧನ

ಉಡುಪಿ, ಆ.27: ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಕೆ. ರಾಮದಾಸ್ ಭಟ್ (90) ವಯೋಸಹಜ ಅನಾರೋಗ್ಯದಿಂದ ಬೆಳಗಾವಿಯ ಪುತ್ರನ ಮನೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಎಂಜಿಎಂ ಕಾಲೇಜಿನ ಪ್ರಾರಂಭದ ದಿನಗಳಲ್ಲೇ ಸೇರ್ಪಡೆಗೊಂಡ ಪ್ರೊ.ಭಟ್, ದಿ.ಪ್ರೊ.ಕು.ಶಿ.ಹರಿದಾಸ ಭಟ್ಟರ ನಿಕಟವರ್ತಿಯಾಗಿ ಕಾಲೇಜಿನ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ, ವಿಭಾಗ ಮುಖ್ಯಸ್ಥ, ಉಪ ಪ್ರಾಚಾರ್ಯ ಹಾಗೂ ಪ್ರಾಚಾರ್ಯರೂ ಆಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು. ಇಂಗ್ಲಿಷ್ ಭಾಷೆಯ ಮೇಲೆ ಅಪಾರ ಪ್ರೌಢಿಮೆ ಹೊಂದಿದ್ದ ಇವರು ಕಾಲೇಜಿನ ಎನ್‌ಸಿಸಿ ನೌಕಾದಳದ ಮುಖ್ಯಸ್ಥರಾಗಿ ಬಹಳ ವರ್ಷ ಕಾರ್ಯನಿರ್ವಹಿಸಿದ್ದರು.
ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ಸಂಶೋಧನಾ ಕೇಂದ್ರದ ಸಹ ನಿರ್ದೇಶಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ ಈ ಸಂಸ್ಥೆಗಳ ಯಕ್ಷಗಾನ ಹಾಗೂ ಜಾನಪದ ತಂಡಗಳನ್ನು ದೇಶ ಹಾಗೂ ವಿದೇಶಗಳಿಗೆ ಕೊಂಡೊಯ್ದು ಕಾರ್ಯಕ್ರಮಗಳನ್ನು ಏರ್ಪಡಿಸು ವಲ್ಲಿ ತಂಡದ ಮುಖ್ಯಸ್ಥರಾಗಿ ಯಶಸ್ವಿ ಕಾರ್ಯನಿರ್ವಹಿಸಿದ್ದಾರೆ.





