ಲಂಚ ಸ್ವೀಕಾರ: ಪ.ಪಂ ಮುಖ್ಯಾಧಿಕಾರಿ ಸೇರಿ ಇಬ್ಬರು ಎಸಿಬಿ ಬಲೆಗೆ

ಬೆಂಗಳೂರು, ಆ.27: ಸಾಮಗ್ರಿಗಳನ್ನು ಪೂರೈಸುವ ಸಂಬಂಧ ಹಣ ಬಿಡುಗಡೆಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸೇರಿ ಇಬ್ಬರು ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇಲ್ಲಿನ ನಾಯಕನಹಟ್ಟಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವರದಾ ಶ್ರೀ ಭೂತಪ್ಪ ಮತ್ತು ಅಕೌಂಟೆಂಟ್ ಕನ್ಸಲ್ಟಂಟ್ ಸರ್ಫರಾಜ್ ಎಂಬವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿದೆ.
ಏನಿದು ಆರೋಪ?: ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಸಿಬ್ಬಂದಿಗಳು ಪ್ರತ್ಯೇಕವಾಗಿ ಕುಳಿತು ಕರ್ತವ್ಯ ನಿರ್ವಹಿಸಲು ಅವಶ್ಯಕವಿರುವ ಅಲ್ಯೂಮಿನಿಯಂ ಗ್ಲಾಸ್ ಪಾರ್ಟಿಷನ್ ಸಾಮಗ್ರಿಗಳನ್ನು ಪೂರೈಸಲು ಪಟ್ಟಣ ಪಂಚಾಯಿತಿಯಿಂದ ಆದೇಶ ನೀಡಿದ್ದು, ಅದರಂತೆ ಚಿತ್ರದುರ್ಗದ ನಾಗರಾಜ ಗ್ಲಾಸ್ & ಫೈವುಡ್ಸ್ ಮಳಿಗೆ ಮಾಲಕ ವೈ.ಆರ್ ನಾಗೇಂದ್ರ ಅವರು 99,643 ರೂ.ಗಳ ಕಾಮಗಾರಿ ಸಂಬಂಧಿಸಿದ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಾರೆ.
ಈ ಮೊತ್ತದಲ್ಲಿ 60 ಸಾವಿರ ರೂ.ಗಳನ್ನು ಜಮೆ ಮಾಡಿದ್ದು, ಉಳಿದ ಬಾಕಿ ಮೊತ್ತ 39,643 ರೂ. ಗಳನ್ನು ಪಾವತಿ ಮಾಡಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯು ಸರ್ಫರಾಜ್ ಮೂಲಕ 5 ಸಾವಿರ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಚಿತ್ರದುರ್ಗ ಜಿಲ್ಲಾ ಎಸಿಬಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ಎಸಿಬಿ ಡಿವೈಎಸ್ಪಿ ಎಚ್.ಎಸ್. ಪರಮೇಶ್ವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದಾಗ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವರದಾ ಶ್ರೀ ಭೂತಪ್ಪ ಮತ್ತು ಅಕೌಂಟೆಂಟ್ ಕನ್ಸಲ್ಟಂಟ್ ಸರ್ಫರಾಜ್ ಲಂಚದ ಹಣವನ್ನು ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.







