ಉಡುಪಿ ಜಿಲ್ಲೆ : ಗುರುವಾರ 209 ಮಂದಿಯಲ್ಲಿ ಕೊರೋನ ಪಾಸಿಟಿವ್ ದೃಢ
11 ಸಾವಿರದ ಅಂಚಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ
ಉಡುಪಿ, ಆ.27: ಗುರುವಾರ ಜಿಲ್ಲೆಯಲ್ಲಿ 209 ಮಂದಿಯಲ್ಲಿ ಕೊರೋನ ಸೋಂಕು ದೃಢಪಡುವುದರೊಂದಿಗೆ ಈವರೆಗೆ ರೋಗಕ್ಕೆ ಪಾಸಿಟಿವ್ ಬಂದವರ ಸಂಖ್ಯೆ 11 ಸಾವಿರದ ಅಂಚಿಗೆ ಬಂದು ನಿಂತಿದೆ. ಇಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 10,913ಕ್ಕೇರಿದೆ. ದಿನದಲ್ಲಿ ಒಟ್ಟು 708 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಪತ್ತೆಯಾದ 209 ಮಂದಿಯಲ್ಲಿ ಉಡುಪಿ ತಾಲೂಕಿನ 106 ಮಂದಿ, ಕುಂದಾಪುರ ತಾಲೂಕಿನ 50 ಹಾಗೂ ಕಾರ್ಕಳ ತಾಲೂಕಿನ 45 ಮಂದಿ ಸೇರಿದ್ದು, ಉಳಿದಂತೆ ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಜಿಲ್ಲೆಗೆ ಬಂದ ಎಂಟು ಮಂದಿಯಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಮಕ್ಕಳು ಸೇರಿದಂತೆ 114 ಮಂದಿ ಪುರುಷರು ಹಾಗೂ 95 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 59 ಮಂದಿ ಪುರುಷರು ಹಾಗೂ 71 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ ಎಂದು ಡಾ.ಸೂಡ ವಿವರಿಸಿದರು.
ಪಾಸಿಟಿವ್ ದೃಢಗೊಂಡ 209 ಮಂದಿಯಲ್ಲಿ 78 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 62 ಮಂದಿ ಶೀತಜ್ವರದಿಂದ, ಮೂವರು ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ದೇಶೀಯ ಪ್ರವಾಸ ಮರಳಿದ ಆರು ಮಂದಿಯಲ್ಲಿ ಸೋಂಕು ಪತ್ತೆ ಯಾಗಿದೆ. ಉಳಿದಂತೆ 60 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.
214 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಇಂದು 214 ಮಂದಿ ಚಿಕಿತ್ಸೆಯ ನಂತರ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 35ಮಂದಿ ಕೋವಿಡ್ ಆಸ್ಪತ್ರೆಗಳಿಂದ, 179 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 8197ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2623 ಮಂದಿ ಇನ್ನೂ ಚಿಕಿತ್ಸೆ ಯಲ್ಲಿದ್ದು, ಇವರಲ್ಲಿ 1103 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1520 ಮಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್ಓ ಹೇಳಿದರು.
969 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಗುರುವಾರ ಒಟ್ಟು 969 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 461 ಮಂದಿ, ಕೋವಿಡ್ ಸಂಪರ್ಕಿತರು 220 ಮಂದಿ ಇದ್ದರೆ, ಉಸಿರಾಟ ತೊಂದರೆಯ 10 ಮಂದಿ, ಶೀತಜ್ವರ ದಿಂದ ಬಳಲುವ 39 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್ಸ್ಪಾಟ್ಗಳಿಂದ ಆಗಮಿಸಿದ 239 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 68,787ಕ್ಕೇರಿದೆ. ಇವುಗಳಲ್ಲಿ ಈವರೆಗೆ 57,091 ನೆಗೆಟಿವ್, 10913 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 93 ಮಂದಿ ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಇನ್ನು ಒಟ್ಟು 783 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.
ಜಿಲ್ಲೆಯಲ್ಲಿ ಇಂದು 209 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಇವರಲ್ಲಿ ಒಟ್ಟು 80 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 129 ಮಂದಿ ಹೋಮ್ ಐಸೋಲೇಷನ್ನಲ್ಲಿ ಇದ್ದಾರೆ ಎಂದು ಅವರು ಹೇಳಿದರು.
ಓರ್ವ ಮೃತ್ಯು: ಉಡುಪಿಯ 72ರ ಹರೆಯದ ಹಿರಿಯ ನಾಗರಿಕರು ಕೋವಿಡ್-19ರ ಸೋಂಕಿನೊಂದಿಗೆ ಇಂದು ಮೃತಪಟ್ಟಿದ್ದಾರೆ. ಹೃದಯ, ಕಿಡ್ನಿ, ಮಧುಮೇಹ ಸಮಸ್ಯೆಗೆ ಚಿಕಿತ್ಸೆ ಪಡೆಯುತಿದ್ದ ಇವರಲ್ಲಿ ಕೊರೋನ ಸೊಂಕು ಪತ್ತೆಯಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೋವಿಡ್-19ಕ್ಕೆ 93 ಮಂದಿ ಮೃತಪಟ್ಟಂತಾಗಿದೆ.