ಕೆನೋಶ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ; 17 ವರ್ಷದ ವ್ಯಕ್ತಿ ಬಂಧನ

ಕೆನೋಶ (ಅಮೆರಿಕ), ಆ. 27: ನಿರಾಯುಧ ಕರಿಯ ವ್ಯಕ್ತಿಯೊಬ್ಬರ ಮೇಲೆ ಪೊಲೀಸರು ಗುಂಡು ಹಾರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಕೊಂದ ಪ್ರಕರಣದಲ್ಲಿ ಹದಿಹರಯದ ವ್ಯಕ್ತಿಯೊಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ವಿಸ್ಕಾನ್ಸಿನ್ ರಾಜ್ಯದ ಕೆನೋಶ ನಗರದಲ್ಲಿ ಕರಿಯ ವ್ಯಕ್ತಿ ಜೇಮ್ಸ್ ಬ್ಲೇಕ್‌ರ ಬೆನ್ನಿಗೆ ಅತ್ಯಂತ ಸಮೀಪದಿಂದ ಅವರ ಮೂವರು ಎಳೆಯ ಮಕ್ಕಳ ಎದುರಲ್ಲೇ ಪೊಲೀಸರು ರವಿವಾರ ಗುಂಡು ಹಾರಿಸಿದ್ದರು. ಗಾಯಾಳು ಈಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ.
ಗುಂಡು ಹಾರಿಸಿದ ಘಟನೆಯಿಂದ ಆಕ್ರೋಶಿತರಾದ ಜನರು ಪೊಲೀಸರ ವಿರುದ್ಧ ಪ್ರತಿ ದಿನ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಪ್ರತಿಭಟನೆಯ ವೇಳೆ, ನಾಗರಿಕ ದಿರಿಸಿನಲ್ಲಿದ್ದ ವ್ಯಕ್ತಿಯೊಬ್ಬ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ್ದನು. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
‘‘ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಅವನ ವಿರುದ್ಧ ಉದ್ದೇಶಪೂರ್ವಕ ಪ್ರಥಮ ದರ್ಜೆ ಮಾನವಹತ್ಯೆ ಆರೋಪವನ್ನು ಹೊರಿಸಿದ್ದಾರೆ’’ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಈ ಪ್ರಕರಣದ ಆರೋಪಿಯು 17 ವರ್ಷದವನಾಗಿದ್ದು, ಪ್ರಸಕ್ತ ಲೇಕ್ ಕೌಂಟಿಯ ನ್ಯಾಯಾಂಗ ಬಂಧನದಲ್ಲಿದ್ದಾನೆ’’ ಎಂದಿದ್ದಾರೆ.







