16 ಬೇಡಿಕೆ ಮುಂದಿಟ್ಟು ‘ಸಿಪಿಎಂ’ ವಾರಾಚರಣೆ ಕಾರ್ಯಕ್ರವು

ಮಂಗಳೂರು, ಆ. 27: ದೇಶದೆಲ್ಲೆಡೆ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ಹಿನ್ನೆಲೆಯಲ್ಲಿ 16 ಬೇಡಿಕೆಗಳನ್ನು ಮುಂದಿಟ್ಟು ಸಿಪಿಎಂ ಹಮ್ಮಿಕೊಂಡ ‘ವಾರಾಚರಣೆ’ಯ ಧರಣಿ ಕಾರ್ಯಕ್ರಮವು ಗುರುವಾರ ನಗರದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಕೋರೋನವನ್ನು ಮುಂದಿಟ್ಟು ಜನರನ್ನು ಭಯಭೀತಿಗೊಳಿಸಿ ಅವರ ಜೀವದೊಂದಿಗೆ ಚೆಲ್ಲಾಟವಾಡುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಪ್ರಾಣಗಳನ್ನು ಉಳಿಸಲು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಬದಲಾಗಿ ಜನತೆಯನ್ನು ಇನ್ನಷ್ಟು ಲೂಟಿಗೈಯ್ಯಲು ಕುತಂತ್ರಗಳನ್ನು ಹೆಣೆಯುತ್ತಿದೆ. ಆರೋಗ್ಯ ಸೇವೆ ಮಾಡುವುದಾಗಿ ಸರಕಾರಗಳಿಂದ ಅನುಮತಿ ಪಡೆದು ಮೆಡಿಕಲ್ ಕಾಲೇಜು ಸ್ಥಾಪಿಸಿ ವಿದ್ಯಾರ್ಥಿಗಳಿಂದ ಕೋಟ್ಯಂತರ ರೂ.ವನ್ನು ಕಬಳಿಸಿ ಜಿಲ್ಲೆಯನ್ನೇ ತನ್ನ ಕಪಿಮುಷ್ಠಿಯಲ್ಲಿ ರಿಸಿದೆ. ಖಾಸಗಿ ಆಸ್ಪತ್ರೆಗಳ ಕರ್ಮಕಾಂಡಗಳು ದಿನಬೆಳಗಾದರೆ ಸುದ್ದಿಯಾಗುತ್ತಿದ್ದರೂ ಬಿಜೆಪಿ-ಕಾಂಗ್ರೆಸ್ ಜನಪ್ರತಿನಿಧಿಗಳು ಚಕಾರ ಶಬ್ದವೆತ್ತುತ್ತಿಲ್ಲ ಎಂದು ಆರೋಪಿಸಿದರು.
ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು. ಈ ಸಂದರ್ಭ ಮುಹಮ್ಮದ್ ಮುಸ್ತಫಾ, ಹರೀಶ್ ಪೂಜಾರಿ, ಸಂತೋಷ್ ಆರ್.ಎಸ್, ಆಸಿಫ್,ಆದಂ ಬಜಾಲ್, ಮೇರಿ ಡಿಸೋಜ, ನೌಷಾದ್ ಉಳ್ಳಾಲ ಪಾಲ್ಗೊಂಡಿದ್ದರು.





