13,764 ಕೋಟಿ ರೂ. ಜಿಎಸ್‍ಟಿ ಪರಿಹಾರ ನೀಡಲು ಕೇಂದ್ರಕ್ಕೆ ರಾಜ್ಯದ ಮನವಿ

ಬೆಂಗಳೂರು, ಆ. 27: ಮಹಾಮಾರಿ ಕೊರೋನ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದ್ದು, ನಾಲ್ಕು ತಿಂಗಳ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಪರಿಹಾರವಾಗಿ 13,764 ಕೋಟಿ ರೂ.ಪಾವತಿಸಬೇಕು ಎಂದು ರಾಜ್ಯ ಸರಕಾರ ಜಿಎಸ್ಪಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರಕ್ಕೆ ಮನವಿ ಮಾಡಿದೆ.
ಕೋವಿಡ್ ಮತ್ತು ಪ್ರವಾಹದಿಂದ ರಾಜಸ್ವದ ಕೊರತೆ ಉಂಟಾಗುವ ಸಾಧ್ಯತೆಗಳಿದ್ದು, ಕೋವಿಡ್ ಎದುರಿಸಲು ಹೆಚ್ಚುವರಿ ಹಣಕಾಸಿನ ಅಗತ್ಯವಿದೆ. ರಾಜ್ಯದ ಒಟ್ಟು ತೆರಿಗೆ ರಾಜಸ್ವ 1.80 ಲಕ್ಷ ಕೋಟಿ ರೂ. ಅಂದಾಜಿಸಲಾಗಿದೆ. ಹೀಗಾಗಿ ಕೇಂದ್ರ ಸರಕಾರ ರಾಜ್ಯಗಳಿಗೆ ತೆರಿಗೆ ಸಂಗ್ರಹದ ಕೊರತೆಯನ್ನು ನೀಗಿಸುವುದಾಗಿ ಸ್ಪಷ್ಟವಾಗಿ ಹೇಳಲಾಗಿದೆ. ಆದುದರಿಂದ ತಕ್ಷಣ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ.
ನಾಲ್ಕು ತಿಂಗಳ ಜಿಎಸ್‍ಟಿ ತೆರಿಗೆ ಸಂಗ್ರಹ ಶೇ.71.61ರಷ್ಟು ಪ್ರಗತಿ ಸಾಧಿಸಿದೆ. ಇದು ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ನಾಲ್ಕು ತಿಂಗಳಲ್ಲಿ ಜಿಎಸ್‍ಟಿ ಪರಿಹಾರ 13,764 ಕೋಟಿ ರೂ.ಗಳಾಗಿದ್ದು, ಇದರ ಸಂದಾಯ ರಾಜ್ಯದ ಆರ್ಥಿಕತೆಗೆ ಅವಶ್ಯಕತೆ ಇದೆ. ತೆರಿಗೆ ಪರಿಹಾರಕ್ಕಾಗಿ ವಿಧಿಸುವ ಸೆಸ್ ಕೇಂದ್ರ ಸರಕಾರದ ಪರಿಹಾರದ ಖಾತೆಗೆ ನೇರವಾಗಿ ಜಮೆಯಾಗುವುದರಿಂದ ರಾಜ್ಯಗಳು ಸಾಲ ಪಡೆಯಲು ಕಷ್ಟವಾಗುತ್ತದೆ ಮತ್ತು ಈ ಸಾಲ ಮರುಪಾವತಿಸಲು ಕೇಂದ್ರ ವಿಶೇಷ ತೆರಿಗೆ ವಿಧಿಸುವ ಅಧಿಕಾರ ಇದೆ. 2023ರ ನಂತರ ಅದರ ಅವಧಿಯನ್ನು ಅಧಿಕಾರ ಇದೆ. ಅದಕ್ಕಾಗಿ ಕೇಂದ್ರ ಸಾಲವನ್ನು ಪಡೆದು ತೆರಿಗೆ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.
ರಾಜ್ಯಗಳಿಗೆ ಆರ್ಥಿಕ ಹೊರೆ ಇಲ್ಲದೆ ಸಾಲವನ್ನು ಪಡೆಯುವ ವ್ಯವಸ್ಥೆಯನ್ನು ಮಾಡಿದ್ದು, ಈ ಸಾಲವನ್ನು 3 ವರ್ಷ ಪರಿಹಾರ ಸೆಸ್‍ನ್ನು ವಿಸ್ತರಿಸುವ ಮೂಲಕ ಸಾಲವನ್ನು ಮರು ಪಾವತಿಸಲಾಗುತ್ತದೆ. ರಾಜ್ಯಗಳಿಗೆ ಈ ಬಗ್ಗೆ ಒಪ್ಪಿಗೆ ಸೂಚಿಸಲು ಏಳು ದಿನಗಳ ಸಮಯವನ್ನು ನೀಡಲಾಗಿದೆ
-ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ







