ಚಿಕಿತ್ಸೆ ಸಿಗದ ಪರಿಣಾಮ ವ್ಯಕ್ತಿ ಸಾವು: ತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಆ.27: ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ತನ್ನ ಅಳಿಯನ ಸಾವು ಸಂಭವಿಸಿದೆ ಎಂದು ಆರೋಪಿಸಿ 70 ವರ್ಷದ ವ್ಯಕ್ತಿ ಪತ್ರ ಬರೆದಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಕೊರೋನ ಹೊರತಾಗಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು 20ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಸಂಪರ್ಕಿಸಲಾಯಿತು. ಎರಡು ದಿನ ನಡೆಸಿದ ಪ್ರಯತ್ನ ವಿಫಲವಾಗಿ ಅಳಿಯ ಕೆ.ಸಿ.ಚೇತನ್ ಕುಮಾರ್ ಅವರು ಜು.2ರಂದು ಮೃತಪಟ್ಟರು ಎಂದು ಕೋಮಲನಗರ ನಿವಾಸಿ ಚಿಕ್ಕನರಸಿಂಹಯ್ಯ ಅವರು ಸಿಜೆ ಅವರ ಕಚೇರಿಗೆ ಪತ್ರ ಬರೆದಿದ್ದಾರೆ.
ಕೊರೋನ ಪರೀಕ್ಷೆ ಮಾಡಿಸದೆ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಿಲ್ಲ ಎಂಬ ನೆಪ ಹೇಳಿ ಹಲವು ಆಸ್ಪತ್ರೆಗಳವರು ವಾಪಸ್ ಕಳುಹಿಸಿದ್ದರು. ಕೊರೋನ ಪರೀಕ್ಷೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸ್ ಸಿಬ್ಬಂದಿಗೆ ಮಾತ್ರ ಈ ದಿನ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ ಅಲ್ಲಿಯ ಸಿಬ್ಬಂದಿ ವಾಪಸ್ ಕಳುಹಿಸಿದರು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೊನೆಗೆ ಚಿಕಿತ್ಸೆ ಕೊಡಿಸಲು ನೆಲಮಂಗಲಕ್ಕೆ ಕರೆದೊಯ್ಯಲಾಯಿತು. ಕೃತಕ ಉಸಿರಾಟದ ಅವಶ್ಯಕತೆ ಇದೆ ಎಂದು ತಿಳಿಸಿದ ವೈದ್ಯರು, ಈ ಆಸ್ಪತ್ರೆಯಲ್ಲಿ ಅದು ಲಭ್ಯವಿಲ್ಲ ಎಂದರು. ಮತ್ತೊಂದು ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ಅವರು ಕೊನೆಯುಸಿರೆಳೆದರು ಎಂದು ವಿವರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಪೂರ್ಣ ವರದಿ ಸಲ್ಲಿಸಲು ಸಿಜೆ ಅವರು ಸರಕಾರಕ್ಕೆ ನಿರ್ದೇಶನ ನೀಡಿದರು.







