ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ವ್ಯವಸ್ಥೆ ಕಲ್ಪಿಸಲು ಕಾಂಗ್ರೆಸ್ ಮನವಿ
ಮಂಗಳೂರು, ಆ.27: ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ಮತ್ತೆ ಅಲ್ಲಿಯೇ ವ್ಯಾಪಾರವನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಬೈಕಂಪಾಡಿಯ ಎಪಿಎಂಸಿಯಲ್ಲಿ ಯಾವುದೇ ಸೌಕರ್ಯವಿಲ್ಲದಿರುವುದರಿಂದ ಮತ್ತು ಮೂರು ತಿಂಗಳ ಒಳಗಾಗಿ ಪುನಃ ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವುದಾಗಿ ಅಂದಿನ ಜಿಲ್ಲಾಧಿಕಾರಿಯು ಭರವಸೆ ನೀಡಿದ್ದರಿಂದ ವ್ಯಾಪಾರಸ್ಥರು ಎಪಿಎಂಸಿ ಮಾರುಕಟ್ಟೆಗೆ ತೆರಳಿದ್ದರು. ಅಂದಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಸರಕಾರವನ್ನು ಬೆಂಬಲಿಸಿ ವ್ಯಾಪಾರಸ್ಥರು ಅಧಿಕಾರಿಗಳ ಮತ್ತು ಶಾಸಕರ ಮಾತನ್ನು ನಂಬಿ ಎಪಿಎಂಸಿಗೆ ಹೋಗಿದ್ದು ತಪ್ಪಾಯಿತು ಎನ್ನುವ ಅನುಭವ ಈಗ ಆಗುತ್ತಿದೆ. ಹಾಗಾಗಿ ಕೇಂದ್ರ ಮಾರುಕಟ್ಟೆ ಮತ್ತು ತಾತ್ಕಾಲಿಕ ವ್ಯವಸ್ಥೆ ಪುನರ್ ವಸತಿಯನ್ನು ನಗರದಲ್ಲಿಯೇ ಮಾಡಿಕೊಡಬೇಕು ಎಂದು ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿಸೋಜ ಆಗ್ರಹಿಸಿದರು.
ಕೇಂದ್ರ ಮಾರುಕಟ್ಟೆಯಲ್ಲಿ ಒಳಗಡೆ 106 ಜಿಲ್ಲರೆ ವ್ಯಾಪಾರಸ್ಥರು ಮತ್ತು 241 ಓಪನ್ ಯಾರ್ಡ್ ಸಹಿತ 347 ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಕಳೆದ 5 ತಿಂಗಳಲ್ಲಿ ಈ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ತಲೆಹೊರೆ ಹಮಾಲಿಗಳು, ತರಕಾರಿ ಬೆಳೆದು ಜೀವನ ಸಾಗಿಸುವ ರೈತರು ಮತ್ತವರ ಕುಟುಂಬ ಸಹಿತ 25,000ದಷ್ಟು ಜನರ ಜೀವನ ಅತಂತ್ರವಾಗಿದೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಡಲಾಯಿತು.
ನಿಯೋಗದ್ಫಲ್ಲಿ ಕೇಂದ್ರ ವ್ಯಾಪಾರಸ್ಥರ ಸಂಘದ ಅಹ್ಮದ್ ಬಾವ, ಕೆ.ಎಂ.ಮುಸ್ತಫ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತ್‌ಬೈಲ್, ಮಾಜಿ ಕಾರ್ಪೊರೇಟರ್ ಅಪ್ಪಿ, ಹಬೀಬುಲ್ಲಾ ಕಣ್ಣೂರು ಪಾಲ್ಗೊಂಡಿದ್ದರು.







