‘ಪತ್ರಿಕೋದ್ಯಮದ ಮೌಲ್ಯಗಳನ್ನು ಹತ್ಯೆಗೈಯುತ್ತಿರುವ ರಿಪಬ್ಲಿಕ್ ಟಿವಿ’: ಚಾನೆಲ್ ತೊರೆದ ಪತ್ರಕರ್ತ ತೇಜಿಂದರ್

ಹೊಸದಿಲ್ಲಿ,ಆ.27: ಪ್ರಮುಖ ಪತ್ರಕರ್ತ ತೇಜಿಂದರ್ ಸಿಂಗ್ ಸೋಧಿ ರಿಪಬ್ಲಿಕ್ ಟಿವಿ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ರಿಪಬ್ಲಿಕ್ ಟಿವಿ ವಾಹಿನಿಯು ಪತ್ರಿಕೋದ್ಯಮದ ಮೌಲ್ಯಗಳನ್ನು ಹತ್ಯೆಗೈಯುತ್ತಿದೆಯೆಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಪತ್ರಿಕೋದ್ಯಮದ ಆತ್ಮವನ್ನು ಮೂರುವರೆ ವರ್ಷಗಳಿಂದ ಕೊಲ್ಲುತ್ತಿದ್ದುದಕ್ಕಾಗಿ ತಾನು ಪತ್ರಿಕೋದ್ಯಮದಿಂದ ಕ್ಷಮೆ ಕೇಳುತ್ತಿದ್ದೇನೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿರುವುದಾಗಿ ಅವರು ಟ್ವೀಟಿಸಿದ್ದಾರೆ.
ರಿಪಬ್ಲಿಕ್ ಟಿವಿ ತನಗೆ ಸೂಕ್ತವಾದುದಲ್ಲವೆಂದು ಅರಿಯಲು ಮೂರು ವರ್ಷಗಳೇ ಯಾಕೆ ಬೇಕಾಯಿತೆಂಬ ಟ್ವಿಟ್ಟರಿಗರೊಬ್ಬರ ಪ್ರಶ್ನೆಗೆ ತೇಜಿಂದರ್ ಅವರು, ‘‘ ಅರ್ನಬ್‌ಗೆ ಟಿವಿ ವಾಹಿನಿ ಆರಂಭಿಸಲು ನೆರವಾಗಿದ್ದ ಪ್ರತಿಯೊಬ್ಬ ವ್ಯಕ್ತಿ ಕೂಡಾ ಸುದ್ದಿವಾಹಿನಿಯನ್ನು ಹಾಗೂ ಅವರ ಸಂಸ್ಥೆಯನ್ನು ತೊರೆದಿದ್ದಾರೆ. ಈಗ ಯಾರದರೊಬ್ಬರು ಮಾತನಾಡಬೇಕಾಗಿ ಬಂದಿದೆ.
ಮೌನವಹಿಸುವುದರಿಂದ ಇಂತಹವರಿಗೆ ಯುವಜರನ್ನು ಶೋಷಿಸಲು ಉತ್ತೇಜಿಸಿದಂತಾಗುತ್ತದೆ. ಶೀಘ್ರದಲ್ಲೇ ವಿವರಗಳನ್ನು ನೀಡುವೆ’’ ಎಂದವರು ಉತ್ತರಿಸಿದ್ದರು.
ಅರ್ನಬ್ ಗೋಸ್ವಾಮಿ ಅವರು 2017ರಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ನೆರವಿನೊಂದಿಗೆ ರಿಪಬ್ಲಿಕ್ ಟಿವಿಯನ್ನು ಆರಂಭಿಸಿದ್ದರು. ಒಂದು ವರ್ಷದ ಬಳಿಕ ಅವರು ರಿಪಬ್ಲಿಕ್ ಭಾರತ್ ಸುದ್ದಿ ವಾಹಿನಿಯನ್ನು ಆರಂಭಿಸಿದ್ದರು.
ರಿಪಬ್ಲಿಕ್ ಟಿವಿಯಲ್ಲಿ ಕೋಮುದ್ವೇಷವನ್ನು ಉತ್ತೇಜಿಸುವ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಅರ್ನಬ್ ಅವರು ಎರಡು ಬಾರಿ ಮುಂಬೈ ಪೊಲೀಸರಿಂದ ವಿಚಾರಣೆಗೊಳಗಾಗಿದ್ದರು.







