ದಲಿತರಿಗೆ ನ್ಯಾಯ ಸಲ್ಲಿಸಲು ಸರಕಾರಿ ಅಧಿಕಾರಿಗಳ ವಿಫಲ: ಉ.ಪ್ರ. ಪರಿಶಿಷ್ಟ ಆಯೋಗದ ಸದಸ್ಯ ಓಂಪ್ರಕಾಶ್ ಕಿಡಿ
ಅಲಿಗಢ, ಆ.27: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಬುಡಕಟ್ಟು ದೌರ್ಜನ್ಯ ತಡೆ ಕಾಯ್ದೆಯಡಿ ದಲಿತರಿಗೆ ನ್ಯಾಯ ಸಲ್ಲಿಸಲು ಕೆಲವು ಸರಕಾರಿ ಅಧಿಕಾರಿಗಳು ವಿಫಲ ರಾಗಿದ್ದಾರೆಂದು ಉತ್ತರಪ್ರದೇಶದ ಎಸ್/ಎಸ್‌ಟಿ ಆಯೋಗದ ಸದಸ್ಯ ಓಂ ಪ್ರಕಾಶ್ ನಾಯ್ಕ್ ಆಪಾದಿಸಿದ್ದಾರೆ.
ಅಲಿಗಢದ ಸರ್ಕಿಟ್‌ಹೌಸ್‌ನಲ್ಲಿ ಜಿಲ್ಲಾ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಅಧಿಕಾರಶಾಹಿ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘‘ ಒಂದು ವೇಳೆ ರಾಜ್ಯದ ಆಡಳಿತ ನಿರ್ವಹಣೆಯ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ರಾಮರಾಜ್ಯದ ಘೋಷಣೆ ಹಗಲುಗನಸಾಗಲಿದೆ’’ ಎಂದವರು ಹೇಳಿದರು.
ಕೇಂದ್ರ ಸರಕಾರದ ಸಬ್ ಕಾ ಸಾಥ್ ಸಬ್‌ಕಾ ವಿಕಾಸ್ ನೀತಿಯನ್ನು ದಾರಿತಪ್ಪಿಸಲು ಕೆಲವು ಭ್ರಷ್ಟ ಅಧಿಕಾರಿಗಳು ಯತ್ನಿಸುತ್ತಿದ್ದಾರೆಂದು ಅವರು ಆರೋಪಿಸಿದರು. ಜಿಲ್ಲಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ನಾಯ್ಕಾ ಅವರು ಪರಿಶಿಷ್ಟಜಾತಿ ಹಾಗೂ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಸಂತ್ರಸ್ತ ದಲಿತರಿಗೆ ಆರ್ಥಿಕ ಪರಿಹಾರ ನೀಡುವ ನಿರ್ಲಕ್ಷ ವಹಿಸಲಾಗುತ್ತಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘‘ಅಲಿಗಢ ಜಿಲ್ಲೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ)ಕಾಯ್ದೆಯಡಿ 107 ಪ್ರಕರಣಗಳು ದಾಖಲಾಗಿದ್ದು, ಕೇವಲ 28 ಮಂದಿ ಸಂತ್ರಸ್ತರಿಗೆ ಮಾತ್ರವೇ ಪರಿಹಾರ ದೊರೆತಿದೆಯೆಂದು ಅವರು ಹೇಳಿದರು. ದಲಿತ ಸಂತ್ರಸ್ತರಿಗೆ 1.44 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸುವಂತೆ ಅಲಿಗಢ ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ಆದರೆ ಸಂಬಂಧಪಟ್ಟ ಇಲಾಖೆಯಿಂದ ಇದಕ್ಕೆ ಯಾವುದೇ ಉತ್ತರ ಬಂದಿಲ್ಲ’’ ಎಂದವರು ಹೇಳಿದರು.
ಸರಕಾರವು ಎಲ್ಲ ವರ್ಗಗಳ ಜನತೆಯನ್ನು ಪ್ರತಿನಿಧಿಸುತ್ತದೆ ಹಾಗೂ ಅದು ಯಾವುದೇ ನಿರ್ದಿಷ್ಟ ಗುಂಪು ಅಥವಾ ಸಮುದಾಯಕ್ಕೆ ಸೇರಿದ್ದಲ್ಲವೆಂದು ನಾಯ್ಕೆ ಹೇಳಿದರು.
ಅಲಿಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ 2008ರಲ್ಲಿ ಸ್ವತಃ ತಾನು ಜಮೀನನ್ನು ಖರೀದಿಸಿದ್ದು, 12 ವರ್ಷಗಳ ಬಳಿಕವೂ ಕಂದಾಯ ಅಧಿಕಾರಿಗಳು ಈಗಲೂ ತನಗೆ ಸ್ವಾಧೀನಪತ್ರವನ್ನು ಹಸ್ತಾಂತರಿಸಿಲ್ಲ. ರಾಜ್ಯ ಆಡಳಿತ ಯಂತ್ರದ ಕೆಳಸ್ತರದ ಕೆಂಪುಪಟ್ಟಿ ನೀತಿಯಿಂದಾಗಿ ಸಾರ್ವಜನಿಕರು ಬಾಧಿತರಾಗಿರುವದನ್ನು ಇದು ಬೆಟ್ಟು ಮಾಡಿ ತೋರಿಸುತ್ತದೆ ಎಂದು ನಾಯ್ಕಿ ವಿಷಾದಿಸಿದರು.







