ದೇಶದಲ್ಲಿ ಒಂದೇ ದಿನ 75,760 ಹೊಸ ಕರೋನ ಪ್ರಕರಣಗಳು

ಹೊಸದಿಲ್ಲಿ,ಆ.27: ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 75,760 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ನೂತನ ದೈನಂದಿನ ದಾಖಲೆ ಸೃಷ್ಟಿಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 33,10,234ಕ್ಕೆ ತಲುಪಿದೆ. ಪಾಸಿಟಿವಿಟಿ ದರ ಸ್ಥಿರವಾಗಿದ್ದರೂ ಈ ಅವಧಿಯಲ್ಲಿ 1,023 ಜನರು ಸೋಂಕಿಗೆ ಬಲಿಯಾಗಿದ್ದು,ಸಾವಿನ ಸಂಖ್ಯೆ ಸತತ ಎರಡನೇ ದಿನವೂ ಒಂದು ಸಾವಿರವನ್ನು ದಾಟಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್-19 ಸಾವುಗಳ ಒಟ್ಟು ಸಂಖ್ಯೆ 60,472ಕ್ಕೇರಿದ್ದು, ಸಾವಿನ ದರವು ಶೇ.1.83ರಷ್ಟಿದೆ ಎಂದು ಕೇಂದ್ರ ಗೃಹಸಚಿವಾಲಯವು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 56,013 ಜನರು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದರೊಂದಿಗೆ ಗುಣಮುಖರಾಗಿರುವ ಒಟ್ಟು ರೋಗಿಗಳ ಸಂಖ್ಯೆ 25,23,771ಕ್ಕೇರಿದೆ. ಅಂದರೆ ದೇಶದಲ್ಲಿ ವರದಿಯಾದ ಒಟ್ಟು ಕೋವಿಡ್-19 ಪ್ರಕರಣಗಳ ಪೈಕಿ ಶೇ.75ಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ. ಆದರೆ ಚೇತರಿಸಿಕೊಂಡಿರುವ ರೋಗಿಗಳಲ್ಲಿ ಕೋವಿಡೋತ್ತರ ಲಕ್ಷಣಗಳ ಬಗ್ಗೆ ಹೊಸ ಕಳವಳಗಳು ವ್ಯಕ್ತವಾಗಿದ್ದು, ಆರೋಗ್ಯ ಸಚಿವಾಲಯದ ಸಮಿತಿಯೊಂದು ಈ ಬಗ್ಗೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸುತ್ತಿದೆ.
ಗುರುವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9,24,998 ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಹಿಂದಿನ ದಿನದ ಸಂಖ್ಯೆಗೆ ಹೋಲಿಸಿದರೆ ಇದು ಒಂದು ಲಕ್ಷದಷ್ಟು ಅಧಿಕವಾಗಿದೆ. ಭಾರತವು ದಿನವೊಂದಕ್ಕೆ 10 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದು,ಇದನ್ನು ಕಳೆದ ಶನಿವಾರ ಸಾಧಿಸಲಾಗಿತ್ತು.
ದಾಖಲೆಯ ಸಂಖ್ಯೆಯಲ್ಲಿ ಪಾಸಿಟಿವ್ ಕೇಸ್‌ಗಳು ವರದಿಯಾಗುತ್ತಿದ್ದರೂ,ಪರೀಕ್ಷೆಗಳಲ್ಲಿ ಹೆಚ್ಚಳವು ಪಾಸಿಟಿವಿಟಿ ದರವು ಶೇ.8.1ರಲ್ಲಿ ಸ್ಥಿರವಾಗಿರುವಂತೆ ಮಾಡಿದೆ. ಈ ದರವು ಪರೀಕ್ಷೆಗಳು ರೋಗದ ಹರಡುವಿಕೆ ದರಕ್ಕೆ ಅನುಗುಣವಾಗಿವೆಯೇ ಎನ್ನುವುದನ್ನು ಒರೆಗೆ ಹಚ್ಚುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಂತೆ ಆದರ್ಶ ದರವು ಶೇ.5 ಆಗಿದೆ.
ಒಟ್ಟು ಪ್ರಕರಣಗಳ ಪೈಕಿ ಶೇ.25ರಷ್ಟು ಈಗಲೂ ಸಕ್ರಿಯವಾಗಿದ್ದು,ರೋಗಿಗಳು ವೈದ್ಯಕೀಯ ನಿಗಾದಡಿ ಮನೆಗಳಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಅಥವಾ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳ ಪೈಕಿ ಶೇ.2.70 ಜನರಿಗೆ ಆಮ್ಲಜನಕ ನೀಡಲಾಗುತ್ತಿದ್ದರೆ,ಶೇ.1.92ರಷ್ಟು ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ ಮತ್ತು ಶೇ.0.29 ರೋಗಿಗಳಿಗೆ ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ಆರೋಗ್ಯ ಸಚಿವಾಲಯದ ಹಲವಾರು ಅಧಿಕಾರಿಗಳು ಸೇರಿದ್ದಾರೆ ಎಂದು ಪ್ರಕಟಣೆಯು ತಿಳಿಸಿದೆ.
ಕಾಯಿಲೆಯ ಹರಡುವಿಕೆ ದರವನ್ನು ಅಂದಾಜಿಸುವ ಭಾರತದ ‘ಆರ್ ವ್ಯಾಲ್ಯೂ ’ಈ ವಾರ ತನ್ನ ಕನಿಷ್ಠ ಮಟ್ಟವಾದ 1.04ಕ್ಕೆ ತಗ್ಗಿದೆ. ಆದರೆ ಅದು ಒಂದಕ್ಕಿಂತ ಕೆಳಗಿಳಿದರೆ ಮಾತ್ರ ಆ ಬಗ್ಗೆ ನೆಮ್ಮದಿ ತಳೆಯಬಹುದು. ತಮಿಳುನಾಡಿನಂತಹ ಕೆಲವು ತೀವ್ರ ಪೀಡಿತ ರಾಜ್ಯಗಳು ಈಗ ಈ ಗುರಿಯನ್ನು ತಲುಪುವ ಲಕ್ಷಣಗಳನ್ನು ತೋರಿಸುತ್ತಿವೆ ಎಂದು ಸಚಿವಾಲಯವು ತಿಳಿಸಿದೆ.
ಕೊರೋನ ವೈರಸ್‌ನಿಂದ ಅತ್ಯಂತ ಬಾಧಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,18,711ಕ್ಕೇರಿದ್ದು,ಈ ಪೈಕಿ 14,888 ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ. ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವ ರಾಷ್ಟ್ರೀಯ ಸರಾಸರಿ ಅವಧಿ 32 ದಿನಗಳಾಗಿದ್ದರೆ,ಮಹಾರಾಷ್ಟ್ರದಲ್ಲಿ ಅದು 37 ದಿನಗಳಾಗಿದೆ.
ಕರ್ನಾಟಕದಲ್ಲಿ ಸಾವಿನ ದರ ಶೇ.1.70 ಮತ್ತು ಪ್ರಕರಣಗಳ ಬೆಳವಣಿಗೆ ದರ ಶೇ.2.68ರಷ್ಟಿದೆ. ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕು ಹೆಚ್ಚು ವೇಗದಿಂದ ಹರಡುತ್ತಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 3,00,406ಕ್ಕೇರಿದೆ.







