ಕೇರಳ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ‘ಜನಂ ಟಿವಿ’ ಆ್ಯಂಕರ್ ವಿಚಾರಣೆ ನಡೆಸಿದ ಅಧಿಕಾರಿಗಳು
ಚಾನೆಲ್ ಜೊತೆ ಸಂಬಂಧವಿಲ್ಲ ಎಂದ ಬಿಜೆಪಿ

ಕೊಚ್ಚಿ: ಕೇರಳ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಕೇರಳದ ಟಿವಿ ಆ್ಯಂಕರ್ ಒಬ್ಬರ ವಿಚಾರಣೆ ನಡೆಸಿದ್ದಾರೆ. ಕೇರಳದಲ್ಲಿ ಭಾರೀ ಸುದ್ದಿ ಮಾಡಿದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವ ಆರೋಪಕ್ಕೆ ಸಂಬಂಧಿಸಿ ‘ಜನಂ ಟಿವಿ’ ಆ್ಯಂಕರ್ ಅನಿಲ್ ನಂಬಿಯಾರ್ ರನ್ನು 5 ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದರು.
ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಬ್ಯಾಗೇಜ್ ನಲ್ಲಿ ಭಾರೀ ಪ್ರಮಾಣದ ಚಿನ್ನ ಪತ್ತೆಯಾದ ಅದೇ ದಿನ ಸ್ವಪ್ನಾ ಸುರೇಶ್ ಜೊತೆ ಅನಿಲ್ ನಂಬಿಯಾರ್ ಫೋನ್ ನಲ್ಲಿ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದ ನಂತರ ಅಧಿಕಾರಿಗಳು ನಂಬಿಯಾರ್ ಮೇಲೆ ಕಣ್ಣಿಟ್ಟಿದ್ದಾರೆ.
ಅಂತರ ಕಾಪಾಡಿಕೊಂಡ ಬಿಜೆಪಿ
ಕೇರಳದ ಜನಂ ಟಿವಿ ಬಿಜೆಪಿ ಮತ್ತು ಆರೆಸ್ಸೆಸ್ ಜೊತೆ ಸಂಬಂಧ ಹೊಂದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಈ ಬೆಳವಣಿಗೆ ಪ್ರಕರಣಕ್ಕೆ ಮತ್ತೊಂದು ರಾಜಕೀಯ ತಿರುವು ನೀಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ರನ್ನು ಪತ್ರಕರ್ತರು ಪ್ರಶ್ನಿಸಿದ್ದು, ‘ಬಿಜೆಪಿಗೆ ಜನಂ ಟಿವಿ ಜೊತೆ ಯಾವುದೇ ಸಂಬಂಧವಿಲ್ಲ. ಜನಂ ಟಿವಿ ಬಿಜೆಪಿಯ ಚಾನೆಲ್ ಅಲ್ಲ ಮತ್ತು ಪಕ್ಷಕ್ಕೆ ನಂಬಿಯಾರ್ ಅಥವಾ ಇತರ ಸಂಪಾದಕರ ಜೊತೆ ಯಾವುದೇ ನೇರ ಸಂಬಂಧವಿಲ್ಲ” ಎಂದಿದ್ದಾರೆ.
ಆದರೆ 2015ರಲ್ಲಿ ಸುರೇಂದ್ರನ್ ಮಾಡಿದ್ದರು ಎನ್ನಲಾದ ಫೇಸ್ ಬುಕ್ ಪೋಸ್ಟ್ ನ ಫೋಟೊವೊಂದು ಈಗ ವೈರಲ್ ಆಗುತ್ತಿದೆ.
“ಇಂದಿನ ದಿನಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದೆ ಪಕ್ಷಪಾತ ಧೋರಣೆಯ ಮಾಧ್ಯಮಗಳು. ದೀರ್ಘ ಕಾಲದಿಂದ ನಿರೀಕ್ಷಿಸುತ್ತಿದ್ದ ಜನಂ ಟಿವಿ ನಮ್ಮ ಮುಂದಿದೆ. ಇದು ನಮಗೆ ಆಶಾಕಿರಣವಾಗಲಿದೆ” ಎಂದು ಸುರೇಂದ್ರನ್ ಅವರದ್ದು ಎಂದು ಹೇಳಲಾದ 2015ರ ಪೋಸ್ಟ್ ನಲ್ಲಿ ಬರೆಯಲಾಗಿದೆ.







