ಕಾಂಗ್ರೆಸ್ ಭಿನ್ನಮತೀಯರಿಗೆ ಪ್ರಬಲ ಸಂದೇಶ ರವಾನಿಸಿದ ಸೋನಿಯಾ ಗಾಂಧಿ

ಹೊಸದಿಲ್ಲಿ, ಆ.28: ಪಕ್ಷದ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಾಗಿದೆ ಎಂದು ಆಗ್ರಹಿಸಿ ಕಾಂಗ್ರೆಸ್‌ನ 23 ಹಿರಿಯ ನಾಯಕರು ಹೈಕಮಾಂಡ್‌ಗೆ ಪತ್ರ ಬರೆದಿರುವ ಕೆಲವೇ ದಿನಗಳಲ್ಲಿ ಸೋನಿಯಾ ಗಾಂಧಿ ಅವರು ಸಂಸತ್ತಿನ ಎರಡೂ ಸದನದಲ್ಲಿ ಪ್ರಮುಖ ಸ್ಥಾನಗಳಿಗೆ ಪಕ್ಷ ನಿಷ್ಠರಿಗೆ ಮಣೆ ಹಾಕುವ ಮೂಲಕ ಪ್ರಬಲ ಸಂದೇಶ ರವಾನಿಸಿದರು.
ಎರಡು ಬಾರಿಯ ಸಂಸದ ಗೌರವ್ ಗೊಗೊಯ್ ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ.
ಲುಧಿಯಾನದ ಸಂಸದೆ ರಣವೀತ್ ಸಿಂಗ್ ಬಿಟ್ಟು ಅವರನ್ನು ಸಚೇತಕರನ್ನಾಗಿ ನೇಮಿಸಲಾಗಿದೆ.
ಹೈಕಮಾಂಡ್‌ಗೆ ಪತ್ರ ಬರೆದಿರುವ ನಾಯಕರ ಪೈಕಿ ಒಬ್ಬರಾಗಿರುವ ಆನಂದಪುರ ಸಾಹಿಬ್ ಸಂಸದ ಮನೀಷ್ ತಿವಾರಿ ಎರಡು ಬಾರಿ ಸಂಸದರಾಗಿ,ಎನ್‌ಎಸ್‌ಯುಐ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಅವರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೇರಳದವರಾದ ಕೆ.ಸುರೇಶ್‌ರನ್ನು ಲೋಕಸಭೆಯ ಮುಖ್ಯ ಸಚೇತಕರನ್ನಾಗಿ ನೇಮಿಸಿ ಮೂರು ಬಾರಿಯ ಸಂಸದ ಶಶಿ ತರೂರ್‌ರನ್ನು ಕಡೆಗಣಿಸಲಾಗಿದೆ. ರಾಹುಲ್ ಗಾಂಧಿ ಅವರ ಆಪ್ತ ಕೆ.ಸಿ.ವೇಣುಗೋಪಾಲ್‌ರನ್ನು ರಾಜ್ಯಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಐವರು ಸದಸ್ಯರ ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿದೆ. ಜೈರಾಮ್ ರಮೇಶ್‌ರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.







