ಎಚ್.ವಿಶ್ವನಾಥ್ ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆ ನೀಡಬಾರದು: ಸಚಿವ ಶಿವರಾಮ ಹೆಬ್ಬಾರ್

ಹುಬ್ಬಳ್ಳಿ, ಆ.28: ನಾವು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಂದಾಗ ಆ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಿರಿಯರಾದ ಎಚ್. ವಿಶ್ವನಾಥ್ ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ಉಂಟು ಮಾಡಬಾರದು ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಯಾವ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಕುರಿತು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಬಿಜೆಪಿ ಸೇರಿದ ಮೇಲೆ ಅವರು ಪಕ್ಷದ ನಿಲುವಿಗೆ ಬದ್ಧರಾಗಿರಬೇಕು. ಪಕ್ಷದ ಸಿದ್ಧಾಂತಕ್ಕೆ ಹೊಂದಿಕೊಳ್ಳಬೇಕು. ಗುರುವಾರ ಅವರಿಗೆ ಕರೆ ಮಾಡಿದರೆ, ಸಿಗಲಿಲ್ಲ. ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದರು.
ಇಎಸ್‍ಐ ಆಸ್ಪತ್ರೆಗಳಲ್ಲಿ ಪ್ರತಿವರ್ಷ ಸಾಕಷ್ಟು ಔಷಧಿಗಳು ಉಳಿಯುತ್ತಿವೆ. ಆದ್ದರಿಂದ ಇಎಸ್‍ಐ ಕಾರ್ಡ್ ಇಲ್ಲದವರಿಗೂ ಔಷಧಿಗಳನ್ನು ಕೊಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ಕಾನೂನಿನಲ್ಲಿ ತೊಡಕುಗಳಿದ್ದು, ಬೆಂಗಳೂರಿನಲ್ಲಿ ಸೆ. 4 ಮತ್ತು 5ರಂದು ನಡೆಯುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದರು.





